ಕೆ.ಎಫ್.ಡಿ.ಸಿ ನಿಗಮದ ಸಿಬ್ಬಂದಿಗಳು ಹಾಗೂ ಕಾರ್ಮಿಕರು ವಾಸಿಸುತ್ತಿರುವ ವಸತಿ ಕಾಲೋನಿಗಳು ನಿಗಮದ ಆಸ್ತಿಯಾಗಿದ್ದು , ಮೆಸ್ಕಾಂ ಆದೇಶದನ್ವಯ ಎಲ್ಲಾ ವಿದ್ಯುತ್ ಸಂಪರ್ಕಗಳು ಭದ್ರತಾ ಠೇವಣಿಯನ್ನು ಪಾವತಿಸಬೇಕಿತ್ತು. ಅದೇ ರೀತಿಯಾಗಿ ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಭದ್ರತಾ ಠೇವಣಿಯನ್ನು ಮೆಸ್ಕಾಂ ಸಿಬ್ಬಂದಿಗಳು ಕಾರ್ಮಿಕರ ಬಳಿಯಿಂದಲೇ ವಸೂಲಿ ನಡೆಸುತ್ತಿದ್ದರು ಹಾಗೂ ಭದ್ರತಾ ಠೇವಣಿಯನ್ನು ಪಾವತಿಸಲಾಗದ ವಸತಿ ಗೃಹಗಳ ವಿದ್ಯುತ್ ಸಂಪರ್ಕಗಳನ್ನು ಖಡಿತಗೊಳಿಸುತ್ತಿದ್ದರು. ಈ ಕುರಿತು ಸಮಗ್ರ ಮಾಹಿತಿಯನ್ನು ಕೆ.ಎಫ್.ಡಿ.ಸಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ನಂದೀಶ್ ಅವರು ಸುಳ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುಕಾರ್ಮಿಕರಿಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದರು. ಆ ಸಂದರ್ಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಭದ್ರತಾ ಠೇವಣಿಯನ್ನು ನಿಗಮವೇ ಪಾವತಿಸಿ ಕಾರ್ಮಿಕರಿಗೆ ಹೊರೆಯಾಗದಂತೆ ವರ್ತಿಸಬೇಕು ಎಂಬುದಾಗಿ ಕೆ.ಎಫ್.ಡಿ.ಸಿ ವಿಭಾಗೀಯ ವ್ಯವಸ್ಥಾಪಕ ನಂದಗೋಪಾಲ್ ಅವರಿಗೆ ಮೌಖಿಕವಾಗಿ ಆದೇಶಿಸಿದ್ದರು. ಆದರೂ ಮೆಸ್ಕಾಂ ಸಿಬ್ಬಂದಿಗಳು ಹಾಗೂ ವಿಭಾಗೀಯ ವ್ಯವಸ್ಥಾಪಕರು ಈ ಕುರಿತು ಯಾವುದೇ ಕ್ರಮ ವಹಿಸದೆ ಮತ್ತೆ ಕಾರ್ಮಿಕರು ಭದ್ರತಾ ಠೇವಣಿ ಪಾವತಿಸುವಂತೆ ಒತ್ತಡ ಹೇರುತ್ತಿದ್ದರು. ಈ ವಿಚಾರವನ್ನು ಕೆ.ಎಫ್.ಡಿ.ಸಿ ಕಾರ್ಮಿಕರು ನಿರಂತರವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಅವಲತ್ತುಕೊಳ್ಳುತ್ತಿದ್ದರು. ಇದೀಗ ರಾಧಾಕೃಷ್ಣ ಬೊಳ್ಳೂರು ಅವರ ನಿರಂತರವಾದ ಮನವಿಯ ಮೇರೆಗೆ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಬೋರಯ್ಯ ಮತ್ತು ವ್ಯವಸ್ಥಾಪಕ ನಿರ್ದೇಶಕರು ಇಂದು ತುರ್ತಾಗಿ ನಿಗಮದ ಸಿಬ್ಬಂದಿಗಳು ಹಾಗೂ ಕಾರ್ಮಿಕರು ವಾಸಿಸುತ್ತಿರುವ ವಸತಿ ಗೃಹಗಳ ವಿದ್ಯುತ್ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸುವಂತೆ ಲಿಖಿತವಾಗಿ ಆದೇಶ ನೀಡಿರುವುದು ಕೆ.ಎಫ್.ಡಿ.ಸಿ ಕಾರ್ಮಿಕರ ಪಾಲಿಗೆ ಸಂದ ಜಯವಾಗಿದೆ.*
ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಮೆಸ್ಕಾಂ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸಲು ಆದೇಶ














































