ಜಾಗತಿಕ ತಾಪಮಾನ ಏರಿಕೆ (Global Warming) ಕೇವಲ ಪರಿಸರವನ್ನಷ್ಟೇ ಅಲ್ಲ, ಮನುಷ್ಯನ ಸಂತಾನೋತ್ಪತ್ತಿಯನ್ನೂ ಬುಡಮೇಲು ಮಾಡುತ್ತಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಅತಿಯಾದ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಗಂಡು ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಆಘಾತಕಾರಿ ವಿಷಯ ಸಂಶೋಧನೆಯಿಂದ ಹೊರಬಂದಿದೆ.ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಭಾರತ ಸೇರಿದಂತೆ 34 ದೇಶಗಳ ಸುಮಾರು 50 ಲಕ್ಷ ಜನನಗಳ ದತ್ತಾಂಶವನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಿದೆ.
ಭಾರತದಲ್ಲಿನ ಸ್ಥಿತಿ ಹೇಗಿದೆ?
ಸಂಶೋಧನೆಯ ಪ್ರಕಾರ, ಭಾರತದಲ್ಲಿ ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದಲ್ಲಿ (Second Trimester) ತಾಪಮಾನ ಹೆಚ್ಚಾದಷ್ಟೂ ಗಂಡು ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿದೆ. ವಿಶೇಷವಾಗಿ:
ಹೆಚ್ಚು ವಯಸ್ಸಾದ ತಾಯಂದಿರು.
ಈಗಾಗಲೇ ಹೆಚ್ಚು ಮಕ್ಕಳನ್ನು ಹೊಂದಿರುವವರು.
ಉತ್ತರ ಭಾರತದ ರಾಜ್ಯಗಳಲ್ಲಿ ಗಂಡು ಮಕ್ಕಳಿಲ್ಲದ ಮಹಿಳೆಯರಲ್ಲಿ ಈ ಪರಿಣಾಮ ತೀವ್ರವಾಗಿ ಕಂಡುಬಂದಿದೆ.
ಗಂಡು ಭ್ರೂಣಕ್ಕೆ ಶಾಖದ ಅಪಾಯ ಏಕೆ?
ಸಂಶೋಧಕರು ಕಂಡುಕೊಂಡಂತೆ, 20 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವು ಗಂಡು ಭ್ರೂಣಗಳ ಉಳಿವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಗಂಡು ಭ್ರೂಣಗಳು ಶಾಖದ ಒತ್ತಡಕ್ಕೆ (Heat Stress) ಹೆಚ್ಚು ಸಂವೇದನಾಶೀಲವಾಗಿದ್ದು, ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು ಎಂದು ವರದಿ ತಿಳಿಸಿದೆ.ಲಿಂಗ ಆಯ್ಕೆ ಮತ್ತು ತಾಪಮಾನದ ವಿಚಿತ್ರ ನಂಟು ಈ ಅಧ್ಯಯನದಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ತೀವ್ರ ಶಾಖವು ಲಿಂಗಾಧಾರಿತ ಗರ್ಭಪಾತಗಳ (Sex-selective abortions) ಪ್ರಮಾಣವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದೆ. ಅತಿಯಾದ ಬಿಸಿಲಿನಿಂದಾಗಿ ಜನರು ಗರ್ಭಪಾತದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದಿರುವುದು ಅಥವಾ ಆರೋಗ್ಯದ ಕಾರಣಗಳಿಂದ ಈ ಬದಲಾವಣೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸಮಾಜದ ಮೇಲೆ ಇದರ ಪ್ರಭಾವವೇನು?
ವಿಪರೀತ ಶಾಖವು ಕೇವಲ ಸಾರ್ವಜನಿಕ ಆರೋಗ್ಯದ ಸಮಸ್ಯೆಯಲ್ಲ, ಇದು ಸಮಾಜದ ಲಿಂಗ ಸಮತೋಲನವನ್ನೇ ಏರುಪೇರು ಮಾಡಬಲ್ಲದು ಎಂದು ಮುಖ್ಯ ಸಂಶೋಧಕ ಅಬ್ದೆಲ್ ಘನಿ ಎಚ್ಚರಿಸಿದ್ದಾರೆ. ಬೆಚ್ಚಗಾಗುತ್ತಿರುವ ಈ ಜಗತ್ತಿನಲ್ಲಿ ಜನಸಂಖ್ಯೆಯ ಸಮತೋಲನ ಕಾಪಾಡುವುದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಲಿದೆ.
ಜಾಗತಿಕ ತಾಪಮಾನ ಏರಿಕೆಯಿಂದ ಗಂಡು ಮಕ್ಕಳ ಜನನ ಕುಸಿತ!














































