ಕೇಂದ್ರ ಸರ್ಕಾರದಿಂದ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ

ಸುಳ್ಯ: ಕೇಂದ್ರ ಸರ್ಕಾರದ ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ ಯೋಜನೆಯಡಿ  ​ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ನೇತೃತ್ವದಲ್ಲಿ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸುಳ್ಯದ ಗುತ್ತಿಗಾರಿನಲ್ಲಿ ಅಳವಡಿಸಿರುವ ವಿಶೇಷ ಪ್ರಾತಕ್ಷಿಕೆ ಕುರಿತಂತೆ ಇಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಅಡಿಕೆ ಬೆಳೆಗಾರರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.































































































ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆ ಚುಕ್ಕೆ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಚೌಟ ಅವರು ಶಾಶ್ವತ ಹಾಗೂ ವೈಜ್ಞಾನಿಕವಾದ ಪರಿಹಾರ ಮಾರ್ಗಗಳನ್ನು ಅಳವಡಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಚನಿಲದಲ್ಲಿರುವ ಸುಬ್ರಹ್ಮಣ್ಯ ಪ್ರಸಾದ್‌ ಹಾಗೂ ಸುತ್ತಲಿನ ಅಡಿಕೆ ಬೆಳೆಗಾರರ ತೋಟಕ್ಕೆ ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕರಾದ ಡಾ. ಬಾಲಚಂದ್ರ ಹೆಬ್ಬಾರ್ , ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್‌ಚಂದ್ರ, ಹಾಗೂ ಕೃಷಿ ವಿಜ್ಞಾನಿಗಳ ಜತೆ ಭೇಟಿ ನೀಡಿದ ಸಂಸದರು, ಅಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಅಳವಡಿಸಿರುವ ಪೋಷಕಾಂಶ ಮತ್ತು ವೈಜ್ಞಾನಿಕ ವಿಧಾನ ಆಧಾರಿತ ಪ್ರಾತ್ಯಕ್ಷಿಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರನ್ನು ಈ ಎಲೆಚುಕ್ಕಿ ರೋಗದಿಂದ ರಕ್ಷಿಸುವುದಕ್ಕೆ ಕ್ಯಾ. ಚೌಟ ಅವರು ವೈಜ್ಞಾನಿಕ ಪರಿಹಾರೋಪಾಯಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅದರಂತೆ ಸುಳ್ಯದ ಗುತ್ತಿಗಾರು ಗ್ರಾಮದಲ್ಲಿ ಸುಬ್ರಹ್ಮಣ್ಯ ಪ್ರಸಾದ್‌ ಅವರ ಒಂದೂವರೆ ಎಕರೆ ಸೇರಿದಂತೆ ಸುತ್ತಲಿನ ಅಡಿಕೆ ಕೃಷಿಕರ ಒಟ್ಟು 6 ಎಕರೆಯಲ್ಲಿ ಪ್ರಾಯೋಗಿಕವಾಗಿ ಎಲೆಚುಕ್ಕಿ ರೋಗ ತಡೆಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ(CPCRI)ಯ ವಿಟ್ಲ ಪ್ರಾಂತೀಯ ಕ್ಷೇತ್ರದ  ಮಾರ್ಗದರ್ಶನದಲ್ಲಿ ಪೋಷಕಾಂಶ ಮತ್ತು ವೈಜ್ಞಾನಿಕ ವಿಧಾನಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕಳೆದ ಜೂನ್‌ನಿಂದ ಇವರೆಲ್ಲರ ತೋಟದಲ್ಲಿ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ರೋಗದ ಬಗ್ಗೆ ಕಾಲ-ಕಾಲಕ್ಕೆ ಹೆಚ್ಚಿನ ನಿಗಾ, ಅಗತ್ಯ ಮಾಹಿತಿ ಸಂಗ್ರಹಿಸಿ ಪ್ರಾತ್ಯಕ್ಷೆಗಳ ಮೂಲಕ ಪೂರಕ ಅಧ್ಯಯನ ನಡೆಸಲಾಗುತ್ತಿದೆ. ಜತೆಗೆ, ಕೃಷಿಕರಿಗೂ ಈ ಎಲೆಚುಕ್ಕಿ ರೋಗ ತಡೆಯಲು ಅಡಿಕೆ ತೋಟದಲ್ಲಿ ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಕಾಲ-ಕಾಲಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪೂರಕವಾಗಿ ಗುತ್ತಿಗಾರಿನ ಅಡಿಕೆ ಬೆಳೆಗಾರರ ತೋಟದಲ್ಲಿ ವೈಜ್ಞಾನಿಕ ಅಧ್ಯಯನದ ಪ್ರಗತಿ ಯಾವ ರೀತಿ ಸಾಗುತ್ತಿದೆ; ಅಲ್ಲಿ ರೈತರಿಗೆ ಯಾವೆಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಕ್ಕೆ ಮಾಹಿತಿ-ಮಾರ್ಗದರ್ಶನ ನೀಡಲಾಗುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸುವುದಕ್ಕೆ ಸಂಸದ ಕ್ಯಾ. ಚೌಟ ಅವರು ಇಂದು ಸುಬ್ರಹ್ಮಣ್ಯ ಪ್ರಸಾದ್‌ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಎಲೆಚುಕ್ಕಿ ರೋಗ ನಿಯಂತ್ರಣ ಪ್ರಾತ್ಯಕ್ಷಿಕೆ ಬಗ್ಗೆ ಪರಿಶೀಲಿಸಿದ್ದಾರೆ. ಜತೆಗೆ ಈ ಸಂಶೋಧನೆ ಪ್ರಗತಿ ಬಗ್ಗೆಯೂ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರ್‌ ರಿಸರ್ಚ್‌ ಸಂಸ್ಥೆಗಳ ಕೃಷಿ ವಿಜ್ಞಾನಿಗಳು, ಪರಿಣತರು ಹಾಗೂ ರೈತರೊಂದಿಗೂ ಸಮಾಲೋಚನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಸಿಆರ್‌ಐ ವಿಟ್ಲದ ರಾಜೇಶ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ,  ಮುಖಂಡರಾದ ವೆಂಕಟ್ ದಂಬೆಕೋಡಿ, ಕೇಶವ ಭಟ್ ಮುಳಿಯ,  ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಅಡಿಕೆ ಬೆಳೆಗಾರರು ಮತ್ತು ಸ್ಥಳೀಯರು ಜೊತೆಗಿದ್ದರು.

*ಎಲೆಚುಕ್ಕಿ ರೋಗ ವ್ಯಾಪಕತೆ ಪತ್ತೆಗೆ ಅಟೋಮ್ಯಾಟಿಕ್‌ ವೆದರ್‌  ಸ್ಟೇಷನ್‌ :*

ಎಲೆ ಚುಕ್ಕಿ ರೋಗವು ಸಾಮಾನ್ಯವಾಗಿ ಮಳೆ ಜಾಸ್ತಿಯಾಗಿ ಅದರ ತೇವಾಂಶದಿಂದ ಗಾಳಿ ಮೂಲಕ ಅಡಿಕೆ ಮರಗಳಿಗೆ ವೇಗವಾಗಿ ಹರಡುತ್ತದೆ. ಮಳೆ ಜಾಸ್ತಿ ಸೇರಿದಂತೆ ಹವಾಮಾನ ಬದಲಾವಣೆ ಕೂಡ ಎಲೆಚುಕ್ಕಿ ರೋಗ ವ್ಯಾಪಕಕ್ಕೆ ಒಂದು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಪ್ರಸಾದ್‌ ಅವರ ಅಡಿಕೆ ತೋಟದಲ್ಲಿ ಅಧ್ಯಯನದ ದೃಷ್ಟಿಯಿಂದ ಅಟೋಮ್ಯೆಟಿಕ್‌ ವೆದರ್‌  ಸ್ಟೇಷನ್‌ ಕೂಡ ಅಳವಡಿಸಲಾಗಿದೆ. ಇದರಿಂದ ಎಷ್ಟು ಪ್ರಯಾಣದ ಮಳೆಯಾಗಿದೆ, ತೇವಾಂಶ, ತಾಪಮಾನ ಸೇರಿದಂತೆ ಹವಾಮಾನ ಬದಲಾವಣೆಯಿಂದ ಈ ಎಲೆಚುಕ್ಕಿ ರೋಗ ಯಾವ ರೀತಿ ಹರಡುತ್ತದೆ ಎಂಬುದರ ಅಧ್ಯಯನ ಕೂಡ ಇದರಿಂದ ಸಾಧ್ಯವಾಗಲಿದೆ.

Leave a Comment

Your email address will not be published. Required fields are marked *

error: Content is protected !!
Scroll to Top