ಮೊಬೈಲ್ ಬಳಸದಂತೆ ತಾಯಿ ಬೈದು ಬುದ್ಧಿಮಾತು ಹೇಳಿದ್ದಕ್ಕೆ ಬೇಸತ್ತು 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿಂದ ವರದಿಯಾಗಿದೆ.
ನಾಪತ್ತೆಯಾದ ಬಾಲಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿಯಾಗಿದ್ದು, ಪ್ರಸ್ತುತ ಸುಳ್ಯದ ಬೋರುಗುಡ್ಡೆಯಲ್ಲಿ ಪೋಷಕರೊಂದಿಗೆ ವಾಸವಿದ್ದ ಸೈಯದ್ ಆಲಿ ಸೈಯದ್ ಗೌಸ (16) ಎಂದು ಗುರುತಿಸಲಾಗಿದೆ.
ಬಾಲಕನ ತಾಯಿ ಸಲ್ಮಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಲ್ಮಾ ಅವರು ತಮ್ಮ ಪತಿ ಹಾಗೂ ಮಗ ಸೈಯದ್ ಆಲಿ ಸೈಯದ್ ಗೌಸನೊಂದಿಗೆ ಸುಳ್ಯದಲ್ಲಿ ವಾಸವಾಗಿದ್ದಾರೆ.
ಮೇ 30, 2026 ರಂದು ಬೆಳಿಗ್ಗೆ ಬಾಲಕ ಸೈಯದ್ ಆಲಿ ಸತತವಾಗಿ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ತಾಯಿ ಸಲ್ಮಾ ಮಗನಿಗೆ ಬೈದು, ಮೊಬೈಲ್ ಹವ್ಯಾಸ ಬಿಡುವಂತೆ ಬುದ್ಧಿಮಾತು ಹೇಳಿದ್ದರು.
ಇದರಿಂದ ಮನಸ್ತಾಪ ಮಾಡಿಕೊಂಡ ಬಾಲಕ, ಸ್ವಲ್ಪ ಸಮಯದ ಬಳಿಕ ಯಾರಿಗೂ ಹೇಳದೆ ಮನೆಯಿಂದ ಹೊರಹೋಗಿದ್ದಾನೆ.ಮಗ ಎಷ್ಟು ಹೊತ್ತಾದರೂ ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಪೋಷಕರು, ಆತನ ಗೆಳೆಯರ ಬಳಿ, ಸಂಬಂಧಿಕರ ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರವಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕನ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಸಲ್ಮಾ ಅವರು ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿ ಮಗನನ್ನು ಪತ್ತೆಹಚ್ಚಿಕೊಡುವಂತೆ ಕೋರಿ ದೂರು ದಾಖಲಿಸಿದ್ದಾರೆ. ಸದ್ಯ ಸುಳ್ಯ ಪೊಲೀಸರು ಅಪರಾಧ ಕ್ರಮಾಂಕ: 73/2026, ಕಲಂ: 137 (2) BNS 2023 (ಭಾರತೀಯ ನ್ಯಾಯ ಸಂಹಿತೆ) ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾದ ಅಪ್ರಾಪ್ತ ಬಾಲಕನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಮೊಬೈಲ್ ಬಳಸದಂತೆ ಮಗನಿಗೆ ಬುದ್ದಿ ಮಾತು ಹೇಳಿದ ತಾಯಿ,ಮಗ ನಿಗೂಡವಾಗಿ ನಾಪತ್ತೆ



















