ಜೂ.15ರಿಂದ ಜೂ.18ರ ತನಕ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯದ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ – ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಜೂನ್ 15ರಿಂದ ಜೂ.18ರ ತನಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕಾಮತ್,ಧರ್ಮದರ್ಶಿ ಉಮೇಶ್ ಪಿ.ಕೆ,ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ತಿಳಿಸಿದ್ದಾರೆ.
ಅವರು ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚೆಗೆ ಸ್ಥಳದ ಮತ್ತು ದೈವಗಳ ಬಗ್ಗೆ ಪ್ರಶ್ನಾಚಿಂತನೆ ಇಟ್ಟಾಗ ದೈವಗಳಿಗೆ ನೂತನ ಶಿಲಾಮಯ ಗುಡಿ ನಿರ್ಮಿಸಬೇಕೆಂಬ ಚಿಂತನೆ ಮೂಡಿ ಬಂದು ಆ ಪ್ರಕಾರ ತಂತ್ರಿಗಳಾದ ದೇಲಂಪಾಡಿಯ ಬ್ರಹ್ಮಶ್ರೀ ವೇ। ಮೂ॥ ಗಣೇಶತಂತ್ರಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್‌ ರವರ ನೇತೃತ್ವದಲ್ಲಿ ಶ್ರೀ ದೈವಗಳಿಗೆ ಶಿಲಾಮಯ ಗುಡಿ ಮತ್ತು ಗುಳಿಗ ದೈವಕ್ಕೆ ನೂತನ ಕಟ್ಟೆಯನ್ನು ನಿರ್ಮಿಸಲಾಗಿರುತ್ತದೆ.
ಈ ಎಲ್ಲಾ ಜೀರ್ಣೋದ್ಧಾರದ ಕಾಮಗಾರಿಗಳು ಶಂಕು ಸ್ಥಾಪನೆಯಿಂದ ಪ್ರಾರಂಭಿಸಿ ಕೇವಲ 64 ದಿನಗಳೊಳಗೆ ಪೂರೈಸಿಕೊಂಡು ಈದೀಗ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ತಯಾರಾಗಿರುತ್ತೇವೆ.
ಇದೇ ಜೂನ್ ತಿಂಗಳ 15 ರಂದು ಪೂರ್ವಾಹ್ನ ಗಂಟೆ 9.00ರಿಂದ ದಶಮ ಸ್ಕಂದ ಪಾರಾಯಣವೂ ನಾರಾಯಣ ಮೂರ್ತಿ ಕಾಂಞಗಾಡ್ ಇವರಿಂದ ಪ್ರಾರಂಭವಾಗುತ್ತದೆ. ಸಂಜೆ ಗಂಟೆ 5.00ಕ್ಕೆ ತಂತ್ರಿಗಳ ಆಗಮನವಾಗುತ್ತದೆ. ತದನಂತರ ವೈದಿಕ ಕಾಠ್ಯಕ್ರಮಗಳು ಪ್ರಾರಂಭಿಸಿ ರಾತ್ರಿ ಗಂಟೆ 9.00ಕ್ಕೆ ಮುಕ್ತಾಯಗೊಳ್ಳಲಿದೆ.
ಜೂನ್ 16 ರಂದು ಬೆಳಿಗ್ಗೆ 7.00ರಿಂದ ಗಣಪತಿ ಹೋಮದಿಂದ ವೈದಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ತದನಂತರ ಭಾಗವತದಶಮ ಸ್ಕಂದ ಪಾರಾಯಣ ಮುಂದುವರೆದು ಪೂರ್ವಾಹ್ನ ಗಂಟೆ 10.00ಕ್ಕೆ ಮುಕ್ತಾಯಗೊಳ್ಳಲಿದೆ.
ಜೂನ್ 17 ರ ಸಂಜೆ ಗಂಟೆ 4.30ರಿಂದ ಭಜನೆಯಿಂದ ಪ್ರಾರಂಭಗೊಂಡು ಗಂಟೆ 6.00ರ ನಂತರ ವಿವಿಧ ಹೋಮ ಹವನಗಳು ನಡೆಯಲಿದೆ.
ಜೂನ್ 18 ರಂದು ವಿಶೇಷವಾಗಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ದಿನ. ಪೂ.ಗಂಟೆ 8.00ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಗಂಟೆ 8.08ರಿಂದ 9.06ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ
ಶ್ರೀ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳಿಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆದು ಬರಲಿದೆ. ತದನಂತರ ದೈವಗಳಿಗೆ ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಆಗಿ ಪ್ರಸಾದ ವಿತರಣೆಯಾಗುತ್ತದೆ.
ಪೂ. ಗಂಟೆ 10.30ರಿಂದ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ಕೃಷ್ಣ ಕಾಮತ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾ ಸ್ವಾಮೀಜಿಗಳವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇ॥ ಮೂ॥ ದೇಲಂಪಾಡಿ ಗಣೇಶ ತಂತ್ರಿಯವರು ಗೌರವ ಉಪಸ್ಥಿತಿಯಲ್ಲಿದ್ದು, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷರಾದ ಡಾ| ಕೆ. ವಿ. ಚಿದಾನಂದ, ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇದರ ಆನುವಂಶಿಕ ಆಡಳಿತ ಮೊಕೇಸರರಾದ ಡಾ| ಹರಪ್ರಸಾದ್ ತುದಿಯಡ್ಕ, ಸುಳ್ಯದ ಮಾನ್ಯ ಶಾಸಕರಾದ ಕು। ಭಾಗೀರಥಿ ಮುರುಳ್ಯ, ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ. ಕೆ. ಉಮೇಶರವರು ಉಪಸ್ಥಿತರಿರುತ್ತಾರೆ.
ಶಿಲೆ ಕಲ್ಲಿನಗುಡಿ ನಿರ್ಮಾಣ, ಮರದ ಮಾಡಿನ ಕೆಲಸ, ತಾಮ್ರದ ಹೊದಿಕೆ, ಗ್ರಾನೆಟ್ ಕಲ್ಲು ಹಾಸು, ಗುಳಿಗನ ಕಟ್ಟೆ, ಅಯ್ಯಂಗಾಯಕಟ್ಟೆ, ಹೀಗೆ ರೂ.75,00,000/- ಲಕ್ಷಗಳ ಕಾಮಗಾರಿಗಳು ಆಗಿವೆ. ಇದರಲ್ಲಿ ಗುಳಿಗನ ಕಟ್ಟೆಯ ದಾನಿಗಳಾಗಿ ಸುಳ್ಯ ಠಾಣೆಯ ಆರಕ್ಷಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಇದನ್ನು ರೂ. 1,80,000/- ದಲ್ಲಿ ಪ್ರಾಯೋಜಿಸಿದ್ದಾರೆ. ಅಯ್ಯಂಗಾಯ ಕಟ್ಟೆಯ ವೆಚ್ಚ ರೂ.30,000/- ವನ್ನು ಶ್ರೀ ಕೈಲಾಶ್ ಶೆಣೈ ಮತ್ತು ಮನೆಯವರು ಪ್ರಾಯೋಜಿಸಿದ್ದಾರೆ.
ಹೆಚ್ಚಿನ ಕಾಮಗಾರಿಗಳಾಗಿ ಶ್ರೀ ದೈವಸ್ಥಾನದಲ್ಲಿ ಪ್ರತಿದಿನ ಸಂಗ್ರಹವಾಗುವ ಹರಿಕೆ, ಉಳಿಕೆ ಮಾಡಿದ ಹಣ ಮತ್ತು ಜೀರ್ಣೋದ್ಧಾರಕ್ಕಾಗಿ ಭಕ್ತಾಧಿಗಳು ನೀಡುವ ದೇಣಿಗೆಯಲ್ಲಿ ಕಾಮಗಾರಿಗಳನ್ನು ಮಾಡಿದ್ದು, ಶಿಲಾನ್ಯಾಸದಿಂದ ಪ್ರಾರಂಭಿಸಿ ಕೇವಲ 64 ದಿನಗಳಲ್ಲಿ ಕೆಲಸ ಕಾರಗಳು ಶ್ರೀ ದೈವಗಳ ಕೃಪೆಯಿಂದ ನಡೆದುಬಂದಿದೆ.
ಈಗಾಗಲೇ ಸುಳ್ಯ ನಗರದ ಪ್ರತಿ ವಾರ್ಡ್ ಮಟ್ಟದಲ್ಲಿಯೂ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ಮಾಡಿದ್ದು, ಅದರ ಮೂಲಕ ಪ್ರತಿ ಮನೆಗಳಿಗೆ ಆಮಂತ್ರಣ ನೀಡಿ ಅವರು ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ.
ಶ್ರೀ ದೈವಗಳ ಪಾಣಿಪೀಠ ನಿರ್ಮಾಣಕ್ಕಾಗಿ ಮುಕ್ತ ಮತ್ತು ವಿಶಾಲಾಕ್ಷ ಶೇಟ್ ಅಂಬಟೆಡ್ಕ ಮನೆ ಸುಳ್ಯ 1ಕೆ.ಜಿ ಬೆಳ್ಳಿಯನ್ನು ದಾನರೂಪದಲ್ಲಿ ನೀಡಿರುತ್ತಾರೆ.
ಜೀರ್ಣೋದ್ಧಾರದ ಕೆಲಸ ಕೆಲಸ ಕಾರ್ಯಗಳಳಲ್ಲಿ ಪ್ರಾರಂಭದಿಂದಲೂ ಈ ತನಕ ಸಂಜೆ ಮತ್ತು ರಾತ್ರಿ ಹೊತ್ತಿನಲ್ಲಿ ಅನೇಕ ಹಿಂದೂ ಯುವಕರ ಸಂಘಟನೆಗಳೂ, ಸ್ಥಳಿಯ ಭಕ್ತಾಧಿಗಳೂ ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದಾರೆ.
4 ದಿನಗಳಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಹಸಿರು ಕಾಣಿಕೆ ನೀಡುವವರಿಗೆ ಅವಕಾಶವಿದ್ದು, ಈಗಾಗಲೇ ವಾರ್ಡ್ ಮಟ್ಟದಲ್ಲಿಯೂ ಮತ್ತು ಸುಳ್ಯ ನಗರದ ಹಿಂದೂ ವರ್ತಕರಲ್ಲಿಯೂ ಮನವಿ ಮಾಡಿಕೊಂಡಿರುತ್ತೇವೆ. ಜೂನ್ 18ರಂದು ದೈವಗಳಿಗೆ ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಎಲ್ಲರಿಗೂ ಅನ್ನಸಂತರ್ಪಣೆ ಇರುತ್ತದೆ.
ವಾಹನ ನಿಲುಗಡೆಗೆ ಇಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗ ಮತ್ತು ಗಾಂಧಿನಗರ ಶಾಲಾ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಿರುತ್ತೇವೆ.
ಶ್ರೀ ಕಲ್ಕುಡ ದೈವಗಳಿಗೆ ಸುಳ್ಯ ಹಾಗೂ ಪರವೂರಿನಲ್ಲಿಯೂ ಅನೇಕ ಭಕ್ತಾಧಿಗಳು ಇದ್ದಾರೆ. ಅನೇಕ ಅಧಿಕಾರಿಗಳು ಇಲ್ಲಿ ಸೇವೆ ಸಲ್ಲಿಸಿ, ಬೇರೆ ಕಡೆಗೂ ವರ್ಗಾವಣೆಗೊಂಡು, ನಿವೃತ್ತಿಗೊಂಡರೂ ಇಲ್ಲಿಗೆ ಬಂದು ಪ್ರಸಾದ ಸ್ವೀಕರಿಸುತ್ತಾರೆ.
ಪ್ರತಿದಿನ ಅನೇಕ ಭಕ್ತಾಧಿಗಳು ಬಂದು ತಮ್ಮ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುವ ಪ್ರಾರ್ಥನೆ ಮಾಡಿಕೊಂಡು ನೆಮ್ಮದಿಯಿಂದ ತೆರಳುತ್ತಿದ್ದಾರೆ.
ಆದುದರಿಂದ ಇದೇ ತಿಂಗಳ ಜೂನ್ 15 ರಿಂದ 18ರ ತನಕ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಕ್ತಾಧಿಗಳು ಭಾಗವಹಿಸುವಂತೆ ಆಹ್ವಾನ ನೀಡುತ್ತಿದ್ದೇವೆ‌ ಎಂದು ಅವರುಹೇಳಿದರು.ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ-ಗುಳಿಗ ದೈವಗಳು ಇದ್ದು. ಸಂಪೂರ್ಣವಾಗಿ ನಶಿಸಿ ಹೋಗಿದ್ದ ದೈವಸ್ಥಾನವನ್ನು 1985ರ ಅಂತ್ಯದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಸ್ಥಳದ ಮಾಲೀಕರಾದ ಶ್ರೀ ರಾಮಕೃಷ್ಣ ರಾವ್ ಪೆರುವಾಜೆ ಇವರು ಕಲ್ಕುಡ ದೈವಸ್ಥಾನಕ್ಕೆ 0.11ಎಕ್ರೆ ಮತ್ತು ಮಿತ್ತೂರ್ ಕಟ್ಟೆಗೆ 0.04 ಎಕ್ರೆ ಸ್ಥಳವನ್ನು ದಾನವಾಗಿ ನೀಡಿ ಕಲ್ಕುಡ ದೈವಸ್ಥಾನದ ಟ್ರಸ್ಟ್‌ಗೆ ನೀಡಿದರು. ಆರ್. ಉಮೇಶ್ ವಾಗ್ಲೆ, ಶ್ರೀ ಪುಟ್ಟಪ್ಪ ಜೋಷಿಯವರ ನೇತೃತ್ವದಲ್ಲಿ ಧರ್ಮದರ್ಶಿ ಮಂಡಳಿ ರಚಿಸಿ ಅದರಲ್ಲಿ ಆರ್.ಉಮೇಶ್ ವಾಗ್ಲೆ, ಪುಟ್ಟಪ್ಪ ಜೋಷಿ, ಪಿ. ನಾರಾಯಣ ಮಡಿವಾಳ ಬೂಡುಪನ್ನೆ, ಬಿ. ಭಾಸ್ಕರ ಐಡಿಯಲ್, ರಾಮಕೃಷ್ಣ ರಾವ್ ಪೆರುವಾಜೆ, ಪಿ. ಕೆ.ಉಮೇಶ್ ಹಾಗೂ ಇತರ ಸಮಾನ ಮನಸ್ಕರು ಒಟ್ಟು ಸೇರಿ 1986 ಜೂನ್ 19ರಂದು ದೇಲಂಪಾಡಿ ವೇದಮೂರ್ತಿ ಬಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾದ ಸನ್ಮಾನ್ಯ ತುದಿಯಡ್ಕ ವಿಷ್ಣಯ್ಯನವರ ಉಪ ಉಪಸ್ಥಿತಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪುನರ್ ನಿರ್ಮಾಣಗೊಂಡು ಶ್ರೀ ಕಲ್ಕುಡ ದೈವವನ್ನು ಪುನ‌ರ್ ಪ್ರತಿಷ್ಠಾಪಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು, ಖಜಾಂಜಿ ಅವಿನಾಶ್ ಕುರುಂಜಿ , ಉಪಾಧ್ಯಕ್ಷ ನಾರಾಯಣ ಕೇಕಡ್ಕ ,ಗಿರೀಶ್ ದೇವರಗುಂಡ, ಸದಾನಂದ ಮೂಲೆಮಜಲು,ಚಂದ್ರಶೇಖರ ಪಿ.ಆರ್,ಬಿ. ಭಾಸ್ಕರ ಐಡಿಯಲ್, ದಿನೇಶ್ ಕುಮಾರ್ ಕೆ.ಸಿ, ಶಶಿಧರ ಆಚಾರ್ಯ ಸುಳ್ಯ, ತಿಮ್ಮಪ್ಪ ಗೌಡ ನಾವೂರು’ಇಂದಿರಾ ರೈ ನಾವೂರು,ವಿನಯಕುಮಾರ್ ಕಂದಡ್ಕ,ಪ್ರಕಾಶ್ ಹೆಗ್ಡೆ ಇತರರು ಉಪಸ್ಥಿತರಿದ್ದರು.











































































































Leave a Comment

Your email address will not be published. Required fields are marked *

error: Content is protected !!
Scroll to Top