ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕು ಹಾಗೂ ತೋಟಗಾರಿಕಾ ಮಿಷನ್ (MIDH) ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ನಿಯಮ 377ರಡಿ ಒತ್ತಾಯಿಸಿದ್ದಾರೆ.
ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳು ಪುನರಾವರ್ತಿತವಾಗಿ ಬರುವ ವಿವಿಧ ರೋಗಗಳಿಂದ ತೀವ್ರವಾಗಿ ಹಾನಿಗೊಳಗಾಗುತ್ತಿವೆ. ಈ ರೋಗಗಳ ನಿವಾರಣೆಗೆ ರೋಗ ನಿರ್ಣಯ, ತೋಟದ ನೈರ್ಮಲ್ಯ, ಪೋಷಕಾಂಶಗಳ ಪೂರೈಕೆ, ಸೂಕ್ತ ಡ್ರೈನೇಜ್ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಹಾಗೂ ವ್ಯಾಪಕವಾಗಿ ಬಾಧಿತಗೊಂಡ ತೋಟಗಳಲ್ಲಿ ರೀಪ್ಲಾಂಟೇಷನ್ ಮಾಡುವಂತಹ ಪೂರ್ಣ ಪ್ರಮಾಣದ ವೈಜ್ಞಾನಿಕ ನಿಯಂತ್ರಣ ಅಥವಾ ಚಿಕಿತ್ಸಾ ಕ್ರಮಗಳ ಅಗತ್ಯವಿದೆ. ಸದ್ಯ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದ ಪಾಲುದಾರಿಕೆಯಲ್ಲಿ ನೀಡುತ್ತಿರುವ ಆರ್ಥಿಕ ನೆರವು ನಿಗದಿತ ಘಟಕ ವೆಚ್ಚಗಳನ್ನು ಆಧರಿಸಿದೆ. ಆದರೆ ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುವ ರೋಗ ಬಾಧೆಯ ತೀವ್ರತೆ ಹಾಗೂ ವೈಜ್ಞಾನಿಕ ಚಿಕಿತ್ಸೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ಭರಿಸಲು ಸಾಕಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ ಇಂಡಿಯನ್ ಕೌನ್ಸಿಲ್ ಆಫ್ ಎಗ್ರಿಕಲ್ಚರ್, ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್(CPCRI) ನೇತೃತ್ವದಲ್ಲಿ, ಡೈರೆಕ್ಟರೇಟ್ ಆಫ್ ಅರೆಕಾನಟ್ ಅಂಡ್ ಸ್ಪೈಸಸ್ ಡೆವಲಪ್‌ಮೆಂಟ್(DASD) ಸಂಸ್ಥೆ ಹಾಗೂ ಬಾಧಿತ ರಾಜ್ಯದ ಸರ್ಕಾರಗಳು ಮತ್ತು ಬೆಳೆಗಾರರ ಸಂಸ್ಥೆಗಳ ಸಹಯೋಗದೊಂದಿಗೆ ನಿಗದಿತ ಕಾಲಮಿತಿಯಲ್ಲಿ ರೋಗದ ಚಿಕಿತ್ಸೆ ಮತ್ತು ವೆಚ್ಚ ಭರಿಸುವುದಕ್ಕೆ ಪೂರಕವಾಗುವ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಈ ಅಧ್ಯಯನದ ಮೂಲಕ ರೋಗ ಬಾಧೆಯ ಹಂತಕ್ಕೆ ತಕ್ಕಂತೆ ವೈಜ್ಞಾನಿಕ ಚಿಕಿತ್ಸೆ ಅಥವಾ ನಿಯಂತ್ರಣಾ ಕ್ರಮಗಳು, ಪ್ರತಿ ಹೆಕ್ಟೇರ್‌ಗೆ ತಗುಲುವ ಔಷಧ, ಗೊಬ್ಬರ, ಕೂಲಿ, ರೋಗನಿರ್ಣಯ ವೆಚ್ಚ, ರೀ-ಪ್ಲಾಂಟೇಷನ್ ಅಗತ್ಯತೆಗಳು ಹಾಗೂ ಅರ್ಹ ಫಲಾನುಭವಿಗಳ ಪರಿಶೀಲನಾ ಮಾನದಂಡಗಳನ್ನು ನಿಗದಿಪಡಿಸಬೇಕೆಂದು ಸಂಸದರು ಸದನದ ಗಮನಸೆಳೆದಿದ್ದಾರೆ.
ಇದಲ್ಲದೇ ಈ ವೈಜ್ಞಾನಿಕ ವರದಿಯ ಆಧಾರದ ಮೇಲೆ MIDH ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ತೋಟಗಾರಿಕಾ ಬೆಳೆಗಳಿಗೆ ಪ್ರತ್ಯೇಕ ರೋಗ-ಆಧಾರಿತ ಘಟಕವನ್ನು (disease-specific component) ರೂಪಿಸಬೇಕು ಹಾಗೂ ಸಣ್ಣ – ಅತಿ ಸಣ್ಣ ರೈತರಿಗೂ ಇದರಲ್ಲಿ ಆದ್ಯತೆ ನೀಡಬೇಕು. ಕೇವಲ ಒಂದು ಬಾರಿ ನೀಡುವ ಇನ್‌ಪುಟ್ ಸಹಾಯಧನ ಅಥವಾ ಪ್ಯಾಕೇಜ್ ನೀಡುವ ಬದಲಿಗೆ, ರೋಗ ನಿರ್ಣಯ, ವಿಸ್ತರಣಾ ಸೇವೆಗಳು ಮತ್ತು ಹಂತ ಹಂತವಾಗಿ ರೋಗ ನಿಯಂತ್ರಣ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು. ರಾಜ್ಯದ ಮುಂದಿನ ವಾರ್ಷಿಕ ಕಾರ್ಯಯೋಜನೆ ಸಿದ್ಧವಾಗುವುದಕ್ಕೂ ಮುನ್ನವೇ ಈ ಬಗ್ಗೆ ಅಧ್ಯಯನವನ್ನು ಮಾಡಿ, ಕರಡು ನಿಯಮಾವಳಿ ಹಾಗೂ ಅಂತಿಮ ನಿರ್ಧಾರಗಳನ್ನು ಸಿದ್ಧಪಡಿಸಿ ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಕ್ಯಾ.ಚೌಟ ಅವರು ಸದನದಲ್ಲಿ ಮನವಿ ಮಾಡಿದ್ದಾರೆ.
*ಕೇಂದ್ರ ಸಚಿವರಿಗೂ ಪತ್ರ ಬರೆದಿದ್ದ ಸಂಸದರು:*
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕಳೆದ ಮೇನಲ್ಲಿ ಸಂಸದ ಕ್ಯಾ.ಚೌಟ ಸವಿಸ್ತಾರವಾದ ಪತ್ರ ಬರೆದು, ಎಂಐಡಿಹೆಚ್ ವೆಚ್ಚದ ಮಿತಿಯಿಂದ ವಿಶೇಷ ವಿನಾಯಿತಿ ನೀಡಿ, ರೈತರ ನೆರವಿಗೆ ಸಮಗ್ರ ಬೆಂಬಲ ಪ್ಯಾಕೇಜ್ ಹಾಗೂ ಎಲೆ ಚುಕ್ಕಿ ರೋಗಕ್ಕೆ ಈ ಹಿಂದೆ ಬಿಡುಗಡೆಯಾಗಿದ್ದ ಅನುದಾನವನ್ನು ಮರುಬಿಡುಗಡೆ ಮಾಡುವಂತೆ ವಿನಂತಿಸಿಕೊಂಡಿದ್ದರು. ಅಲ್ಲದೇ ಹಳದಿ ಎಲೆ ರೋಗದಿಂದ ದ.ಕ. ಚಿಕ್ಕಮಗಳೂರು, ಕೊಡಗು ಸೇರಿದಂತೆ ಸುಮಾರು 16,000 ಹೆಕ್ಟೇರ್ ಪ್ರದೇಶ ಬಾಧಿತಗೊಂಡಿದ್ದು, ಇಲ್ಲಿರುವ ವಾಸ್ತವಿಕ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಮಂಗಳೂರಿಗೆ ಭೇಟಿ ನೀಡುವಂತೆ ಸಂಸದರು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿ, ಕೇಂದ್ರ ಕೃಷಿ ಸಚಿವಾಲಯ, ಐಸಿಆರ್, ಸಿಪಿಸಿಆರ್‌ಐ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಮನ್ವಯದೊಂದಿಗೆ ಜಂಟಿ ಕ್ರಮ ಕೈಗೊಂಡು, ವಿಜ್ಞಾನಿಗಳು ಹಾಗೂ ತೊಂದರೆಗೊಳಗಾದ ರೈತರೊಂದಿಗೆ ಸಂವಾದ ನಡೆಸುವುದರಿಂದ ಈ ಸಮಸ್ಯೆಯ ಕುರಿತು ವಾಸ್ತವಿಕ ಮತ್ತು ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು





































































