ಸುಳ್ಯ : ಸುಳ್ಯ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಸಂಘಟನೆಗಾಗಿ ನೀಡುವ 2026ನೇ ಸಾಲಿನ ಯುವರತ್ನ ಪ್ರಶಸ್ತಿಗೆ ರಂಜಿತ್ ಅಡ್ತಲೆ ಆಯ್ಕೆಗೊಂಡಿದ್ದಾರೆ.
ಸುಳ್ಯ ತಾಲೂಕಿನ ಅಡ್ತಲೆ ಗ್ರಾಮದ ರಂಜಿತ್ ಅಡ್ತಲೆ ಅವರು ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಬೇಸಿಕ್ ಹಾಗೂ ಟ್ಯಾಲಿ ಕಂಪ್ಯೂಟರ್ ಶಿಕ್ಷಣವನ್ನು ಪಡೆದಿದ್ದು, ಪ್ರಸ್ತುತ ಪಿ.ಹೆಚ್.ಡಿ ಹಾಗೂ ಕೆ.ಎ.ಎಸ್. ಪರೀಕ್ಷೆಯ ತಯಾರಿಯಲ್ಲಿದ್ದಾರೆ.
2018ರಿಂದ 2022ರವರೆಗೆ ಸುಳ್ಯದ ಶ್ರೀ ಶಾರದಾ ಮಹಿಳಾ ಕಾಲೇಜಿನಲ್ಲಿ ಲೆಕ್ಕ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ ಅವರು, 2022-23ರಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆಯಲ್ಲಿ ಶಾಖಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 2023ರಿಂದ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯ ವಿವಿಧ ಶಾಖೆಗಳ ಅಭಿವೃದ್ಧಿಯಲ್ಲೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 2023ರಲ್ಲಿ ಮೈಸೂರು ಹಾಗೂ 2024ರಲ್ಲಿ ಕುಶಾಲನಗರ ಶಾಖೆಗಳು ಆರಂಭಗೊಂಡ ಸಂದರ್ಭದಲ್ಲಿ ಶಾಖೆಗಳನ್ನು ಸದೃಢವಾಗಿ ಬೆಳೆಸುವಲ್ಲಿ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಶಾಖೆಗಳಿಗೆ ಸಂಬಂಧಿಸಿದ ಫೆಡರಲ್ ಹಾಗೂ ಸಿವಿಲ್ ನ್ಯಾಯಾಲಯದ ಪ್ರಕರಣಗಳ ನಿರ್ವಹಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿಯೂ ರಂಜಿತ್ ಅಡ್ತಲೆ ಅವರ ಸೇವೆ ಗಮನಾರ್ಹವಾಗಿದೆ. 2018ರಿಂದ ಸ್ಪಂದನ ಗೆಳೆಯರ ಬಳಗ, ಅಡ್ತಲೆ ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, 2025ರಿಂದ ಮಾಧ್ಯಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರಲ್ಲಿ ಸುಳ್ಯದಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಕೃಷಿ ಮೇಳದ ಸಂಯೋಜಕರಾಗಿ ಕಾರ್ಯನಿರ್ವಹಿಸಿ ಮೇಳದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2022ರಿಂದ ವಿವಿಧ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಶಿಬಿರಗಳ ಆಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಅವರು, 2025ರಲ್ಲಿ ಸುಳ್ಯ ಜೂನಿಯರ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ವಸ್ತು ಪ್ರದರ್ಶನ ಮೇಳದ ನಿರ್ವಹಣೆಯಲ್ಲೂ ಪ್ರಮುಖ ಜವಾಬ್ದಾರಿ ವಹಿಸಿದ್ದರು. 2026ರಲ್ಲಿ ಸುಳ್ಯದಲ್ಲಿ ನಡೆದ ಪ್ರಥಮ ಹಲಸು–ಮಾವು ಮೇಳದ ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2026ರ ಅಕ್ಟೋಬರ್‌ನಲ್ಲಿ ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ‘ವಿಕಸಿತ ಭಾರತದ ಕಡೆ ಮಕ್ಕಳ ನಡೆ’ ಧ್ಯೇಯದ ಮಕ್ಕಳ ಹಬ್ಬ ಕಾರ್ಯಕ್ರಮದ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಗರಿಕ ಹಿತರಕ್ಷಣಾ ವೇದಿಕೆಯಲ್ಲಿಯೂ ಸಕ್ರಿಯರಾಗಿರುವ ಅವರು, 2021ರಿಂದ ಜೊತೆ ಕಾರ್ಯದರ್ಶಿಯಾಗಿ ಹಾಗೂ 2024ರಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019ರಲ್ಲಿ ಜೆ.ಸಿ.ಐ. ಸುಳ್ಯ ಸಿಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿರುವ ರಂಜಿತ್ ಅವರು 2017ರಿಂದ ಅರೆಭಾಷೆ ಹಾಗೂ ಕನ್ನಡದಲ್ಲಿ ಹಲವು ಲೇಖನಗಳನ್ನು ರಚಿಸಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ರಂಗಮಯೂರಿ ಕಲಾ ಶಾಲೆಯ ನಿರ್ದೇಶನದ ‘ವಿಶ್ವ ಮಾನವ’ ರಂಗರೂಪಕದಲ್ಲಿ ಪಾತ್ರಧಾರಿಯಾಗಿಯೂ ಕಾಣಿಸಿಕೊಂಡಿದ್ದಾರೆ.
ಡಾ. ಪ್ರಭಾಕರ ಶಿಶಿಲ ಅವರ ‘1837ರ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ’ ಕೃತಿಯನ್ನು ಅರೆಭಾಷೆಗೆ ಭಾಷಾಂತರಿಸುವ ಕಾರ್ಯದಲ್ಲಿ ಸಹಕರಿಸಿರುವ ಅವರು, ಅಡ್ತಲೆ ಉಳ್ಳಾಕುಲು ದೈವದ ಕುರಿತು ಪುಸ್ತಕ ರಚನೆಗೆ ಪ್ರಾರಂಭಿಕ ತಯಾರಿಯನ್ನೂ ನಡೆಸುತ್ತಿದ್ದಾರೆ. ಅರೆಭಾಷೆ ಅಕಾಡೆಮಿಯ ಊರುಗೌಡರ ಕುರಿತ ತರಬೇತಿಯಲ್ಲಿ ಭಾಗವಹಿಸಿರುವ ಅವರು, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದಲ್ಲದೆ, ಸುಮಾರು 30ಕ್ಕೂ ಅಧಿಕ ಸನ್ಮಾನ ಪತ್ರಗಳನ್ನು ರಚಿಸಿರುವ ಅವರು, ವಿವಿಧ ಕಾರ್ಯಕ್ರಮಗಳ ನಿರೂಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉದ್ಯೋಗದ ಜೊತೆಗೆ ಸಾಮಾಜಿಕ ಸೇವೆ, ಸಾಹಿತ್ಯ, ಸಂಘಟನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಂಜಿತ್ ಅಡ್ತಲೆ ಅವರು ಬಹುಮುಖ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಸುಳ್ಯ ಯುವಜನ ಸಂಯುಕ್ತ ಮಂಡಳಿಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.26ರಂದು ಯುವಜನ ಸಂಯುಕ್ತ ಮಂಡಳಿಯ ಯುವ ಸದನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಅತ್ಯುತ್ತಮ ಯುವಕ–ಯುವತಿ ಮಂಡಳಿಗಳಿಗೆ ಪ್ರಶಸ್ತಿ ಹಾಗೂ ಯುವರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಲಿದ್ದು, ಯುವರತ್ನ ಪ್ರಶಸ್ತಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಪ್ರದಾನ ಮಾಡಲಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕ್ರೀಡಾ ಸಾಮಗ್ರಿ ಹಾಗೂ ಸಹಾಯಧನ ವಿತರಣೆ ಮಾಡಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೋಡೆಲ್ ಅಧಿಕಾರಿ ದೇವರಾಜ್ ಮುತ್ನಾಜೆ ಉಪಸ್ಥಿತರಿರಲಿದ್ದಾರೆ.
ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡರು ಉಪಸ್ಥಿತರಿರುವರು.
ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಗೌರವ ಉಪಸ್ಥಿತರಿರಲಿದ್ದು
ಸುಳ್ಯ ತಾಲೂಕಿನ ಯುವಕ–ಯುವತಿ ಮಂಡಳಿಗಳು ಮಹಾಸಭೆಯಲ್ಲಿ ನೋಂದಾವಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ರಂಜಿತ್ ಅಡ್ತಲೆ ಯುವ ರತ್ನ ಪ್ರಶಸ್ತಿಗೆ ಆಯ್ಕೆ

























