ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವವು ಭಕ್ತಿಭಾವದಿಂದ ನಡೆಯುತ್ತಿದ್ದು, ಅ.11ರಂದು ಆರಂಭಗೊಂಡ ಪೂಜಾ ಕಾರ್ಯಕ್ರಮಗಳು ಅ.20ರವರೆಗೆ ಮುಂದುವರಿಯಲಿವೆ.
ಅ.15ರಂದು ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಪುತ್ತೂರಿನ ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆ್ಯಂಡ್ ಕಲ್ಚರ್ (ರಿ.)ನ ವಿದ್ಯಾರ್ಥಿನಿಯರಾದ ಕು. ಆರಾಧನಾ ಬಾಬ್ಲು ಬೆಟ್ಟು ಹಾಗೂ ಕು. ಪ್ರಣತಿ ಜೋಗಿಬೆಟ್ಟು ಅವರು ಭರತನಾಟ್ಯ ಕಲಾ ಸೇವೆ ಸಲ್ಲಿಸಿದರು. ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಅವರ ಶಿಷ್ಯೆಯರಾದ ಇವರು ನೃತ್ಯ ಪ್ರದರ್ಶನದ ಮೂಲಕ ಭಕ್ತರನ್ನು ರಂಜಿಸಿದರು.
ಅ.16ರಂದು ಪಂಜ ವನಿತಾ ಸಮಾಜದ ವತಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ನಾಗತೀರ್ಥದ ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಕಾರ್ಯಕ್ರಮವೂ ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ..ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.
ಪಂಜ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ: ಭಜನೆ, ಭರತನಾಟ್ಯ ಕಲಾ ಸೇವೆ












