ವಿಷನ್ ಚಾರಿಟೇಬಲ್ ಟ್ರಸ್ಟ್ ಟೈಲರಿಂಗ್ ತರಬೇತಿ ಸಂಸ್ಥೆಯಲ್ಲಿ ಶ್ರದ್ಧಾಭಕ್ತಿಯ ಆಯುಧಪೂಜೆ

ಸುಳ್ಯ: ಇಲ್ಲಿನ ಸಾಮಾಜಿಕ ಸಂಸ್ಥೆಯಾದ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ನಡೆಸಲಾಗುತ್ತಿರುವ ಟೈಲರಿಂಗ್ ತರಬೇತಿ ಸಂಸ್ಥೆಯಲ್ಲಿ ಭಾನುವಾರದಂದು ಆಯುಧಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಕಾನತ್ತಿಲದಲ್ಲಿರುವ ಹಿರಿಯರ ಮನೆಯ ಆವರಣದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಟೈಲರಿಂಗ್ ತರಬೇತಿಯ ಪ್ರವರ್ತಕಿ ಕಮಲಾ ಬಾಲಕೃಷ್ಣ, ಪೋಷಕರುಗಳಾದ ಸರಸ್ವತಿ ಗೋಪಾಲ ನಾಯಕ್, ತರಬೇತಿ ಶಿಕ್ಷಕಿ ಬೇಬಿ ಮಾಧವ ಹಾಗೂ ಮಾಜಿ ಟ್ರಸ್ಟಿ ರಾಜೇಶ್ವರಿ ರಂಗಯ್ಯ ಅವರುಗಳು ಹೊಲಿಗೆ ಯಂತ್ರಗಳಿಗೆ ಆರತಿ ಎತ್ತಿ ಪೂಜೆ ನೆರವೇರಿಸಿದರು. ಹಿರಿಯರ ಮನೆಯ ಉಸ್ತುವಾರಿ ಸುಭಾಷ್ ಕೆ.ಎಸ್. ಇವರ ಮಾರ್ಗದರ್ಶನದಲ್ಲಿ ಆಯುಧಪೂಜೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಸದ್ದಿಲ್ಲದ ಸೇವೆಗೆ 24 ವರ್ಷಗಳ ಸಂಭ್ರಮ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಸ್. ರಂಗಯ್ಯ ಅವರು, “ವಿಷನ್ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯಾಗಿ ಸುದೀರ್ಘ 24 ವರ್ಷಗಳು ಸಂದಿವೆ. ಮಾಜಿ ಶಾಸಕರಾದ ದಿವಂಗತ ಸುಬ್ಬಯ್ಯ ನಾಯ್ಕ ಅವರ ಸಮಾಜ ಸೇವಾ ಆಶಯದಂತೆ ಅವರು ಒದಗಿಸಿರುವ ಜಾಗದಲ್ಲಿ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದ್ದು. ಸಮಾಜದಲ್ಲಿ ಸದ್ದಿಲ್ಲದೆ ಹತ್ತಾರು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸದ್ಯ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಹೊಂದಲಾಗಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ,” ಎಂದರು.
ಮಹಿಳೆಯರ ಸ್ವಾಲಂಬನೆಗೆ ಸಿದ್ಧ ಉಡುಪು ಘಟಕ:
ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಂಚಾಲಕಿ ಹಾಗೂ ಟ್ರಸ್ಟಿ ಚಂದ್ರಾವತಿ ಬಡ್ಡಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಅತಿ ಕಡಿಮೆ ಶುಲ್ಕದಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿನಿಯರಿಗೆ ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಿದ್ಧ ಉಡುಪುಗಳ ತಯಾರಿಕಾ ಘಟಕವನ್ನು ಸಣ್ಣ ಮಟ್ಟದಲ್ಲಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಯೋಜನೆ ಇದೆ” ಎಂದು ಮಾಹಿತಿ ನೀಡಿದರು. ಟ್ರಸ್ಟ್ ವತಿಯಿಂದ ಮೂರು ಹೊಲಿಗೆ ಯಂತ್ರಗಳನ್ನು ಖರೀದಿಸಲಾಗಿದ್ದು, ದಾನಿಗಳು ಇನ್ನೆರಡು ಯಂತ್ರಗಳನ್ನು ಒದಗಿಸಿದ್ದಾರೆ” ಎಂದು ನುಡಿದ ಅವರು ದಾನಿಗಳ ಔದಾಯರ್ಯವನ್ನು ಸ್ಮರಿಸಿದರು.
ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ವಿಜಯಾನಂದ ಅವರು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ, ತರಬೇತಿ ಹಾಗೂ ಇನ್ನಿತರ ವಿಚಾರಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಟ್ರಸ್ಟಿಗಳಾದ ಡಿ.ಎಸ್. ಗಿರೀಶ್, ರಾಮಚಂದ್ರ ಪಲ್ಲತಡ್ಕ, ದಯಾನಂದ ಆಳ್ವ, ಉಪಾಧ್ಯಕ್ಷ ಬಾಪು ಸಾಹೇಬ್, ಹಾಗೂ ಆಹ್ವಾನಿತ ಟ್ರಸ್ಟಿ ಬಾಲಕೃಷ್ಣ ಉಪಸ್ಥಿತರಿದ್ದು ಶುಭಹಾರೈಸಿದರು. ಸಂಧ್ಯಾರಶ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಮೋನಪ್ಪ ಅವರು ವಂದನಾರ್ಪಣೆ ಮಾಡಿದರು. ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಗೋಪಾಲ ನಾಯಕ್, ಪದಾಧಿಕಾರಿ ಉಮಾವತಿ, ನಿವೃತ್ತ ಯೋಧರಾದ ಮೋನಪ್ಪ, ಮಾಧವ. ಜೆ, ರಘುನಾಥ್ ಜಟ್ಟಿಪಳ್ಳ, ಸುನಂದ ರೈ, ವಿಶುಕುಮಾರ್, ಹಾಗೂ ಟೈಲರಿಂಗ್ ತರಗತಿಯ ವಿದ್ಯಾರ್ಥಿನಿಯರು ಹಾಗೂ ಊರ ಮಹಿಳೆಯರು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ದಾನಿಗಳಿಗೆ ಮುಕ್ತ ಆಹ್ವಾನ:
ಮಹಿಳೆಯರ ಸ್ವಾವಲಂಬನೆ ಮತ್ತು ನಿರಾಶ್ರಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಟ್ರಸ್ಟ್‌ನ ಈ ಮಾನವೀಯ ಯೋಜನೆಗಳಿಗೆ ಉದಾರ ಮನಸ್ಸಿನ ದಾನಿಗಳು ಆರ್ಥಿಕ ಅಥವಾ ಯಂತ್ರೋಪಕರಣಗಳ ರೂಪದಲ್ಲಿ ನೆರವು ನೀಡಲು ಇಚ್ಛಿಸಿದರೆ ಸ್ವೀಕರಿಸಲಾಗುವುದು ಎಂದು ಟ್ರಸ್ಟ್‌ನ ವಕ್ತಾರರು ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top