ಸುಳ್ಯ: ಸಂಗೀತ ಹಾಗೂ ಕಲೆಯ ಆರಾಧನೆಯೊಂದಿಗೆ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ರಂಗಮಯೂರಿ ಕಲಾ ಶಾಲೆಯಲ್ಲಿ ಅ. 21ರಂದು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಶಾರದಾ ಪೂಜೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ ಹಾಗೂ ಶಾರದಾ ಪೂಜೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ವಿದ್ಯಾದೇವಿ ಶಾರದಾಂಬೆಯ ಸನ್ನಿಧಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ವಿದ್ಯೆ ಮತ್ತು ಕಲೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಸಂಕಲ್ಪದೊಂದಿಗೆ ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಸಂಗೀತ ಗುರುಗಳಾದ ಮಹಾಬಲೇಶ್ವರ ಬಿರ್ಮುಕಜೆ ಹಾಗೂ ಸುಮನ ರಾವ್ ಪುತ್ತೂರು ಅವರಿಗೆ ಗೌರವಪೂರ್ವಕವಾಗಿ ಗುರುವಂದನೆ ಸಲ್ಲಿಸಲಾಯಿತು. ಗುರುಗಳ ಮಾರ್ಗದರ್ಶನ, ಸಂಗೀತ ಸಾಧನೆ ಹಾಗೂ ಕಲಾ ಶಿಕ್ಷಣದಲ್ಲಿ ಅವರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.
ರಂಗಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ಭಜನಾ ಕಾರ್ಯಕ್ರಮ ಭಕ್ತರ ಮನದಲ್ಲಿ ಭಕ್ತಿರಸವನ್ನು ತುಂಬಿತು. ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದ ಸುಮಧುರ ಪ್ರಸ್ತುತಿಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು. ವಿದ್ಯಾರ್ಥಿಗಳ ಸಂಗೀತ ಪ್ರತಿಭೆ ಹಾಗೂ ಕಲಾ ಅಭಿವ್ಯಕ್ತಿ ನೆರೆದವರ ಗಮನ ಸೆಳೆಯಿತು. ಪೂಜೆಯ ಧಾರ್ಮಿಕ ವಾತಾವರಣದ ನಡುವೆ ಸಂಗೀತದ ನಾದಮಾಧುರ್ಯವು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿತು.
ಕಾರ್ಯಕ್ರಮದಲ್ಲಿ ಯು.ಪಿ. ಶಿವಾನಂದ, ಎಓಎಲ್ ಇ ಕಮಿಟಿ ಬಿ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಅಧ್ಯಕ್ಷ ವಿನಯ್ ಬೆದ್ರುಪಣೆ, ಸುಳ್ಯ ಸುದ್ದಿ ಕಚೇರಿಯ ವ್ಯವಸ್ಥಾಪಕರಾದ ಯಶ್ವಿತ್ ಕಾಳಮನೆ , ಪ್ರಣವ ಸಹಕಾರಿ ಸಂಘದ ಸುಳ್ಯ ಶಾಖೆಯ ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ರಂಗಮಯೂರಿ ಕಲಾ ಶಾಲೆಯಲ್ಲಿ ಭಕ್ತಿಭಾವದ ಶಾರದಾ ಪೂಜೆ; ಗುರುಗಳಿಗೆ ಗುರುವಂದನೆ













