ಅಜ್ಜಾವರ : ಶಾಲಾ ಬಸ್ ಗಳ ನಡುವೆ ಅಪಘಾತ

ಸುಳ್ಯ:ಆಲೆಟ್ಟಿ–ನಾರ್ಕೋಡು–ಅಜ್ಜಾವರ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಎರಡು ಖಾಸಗಿ ಶಾಲಾ ಬಸ್‌ಗಳು ಬೆಳ್ಳಪ್ಪಾರೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾದ ಘಟನೆ ನವೆಂಬರ್ 4ರ ಬುಧವಾರ ಬೆಳಗ್ಗೆ ಸಂಭವಿಸಿದೆ.
ಸುಳ್ಯದ ಡೆಂಟಲ್ ಕಾಲೇಜಿನ ಬಸ್ ಹಾಗೂ ರೋಟರಿ ಶಾಲೆಯ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಎರಡೂ ಬಸ್‌ಗಳ ಮುಂಭಾಗಕ್ಕೆ ಹಾನಿಯಾಗಿದೆ. ಬಸ್‌ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಆಲೆಟ್ಟಿ ಮುಖ್ಯ ರಸ್ತೆಯ ನಾಗಪಟ್ಟಣ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಅಜ್ಜಾವರ ರಸ್ತೆಯ ಮೂಲಕ ತಿರುಗಿಸಲಾಗಿದೆ. ಇದರಿಂದ ಪರ್ಯಾಯ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಈಗಾಗಲೇ ಕಿರಿದಾಗಿರುವ ಈ ರಸ್ತೆಯಲ್ಲಿ ಎದುರುಬದುರಾಗಿ ವಾಹನಗಳು ಸಂಚರಿಸುವುದು ಸವಾಲಾಗಿ ಪರಿಣಮಿಸಿದೆ.
ಹೆಚ್ಚಿದ ವಾಹನ ಸಂಚಾರ ಹಾಗೂ ರಸ್ತೆಯ ಇಕ್ಕಟ್ಟಿನಿಂದಾಗಿ ಇಂತಹ ಅಪಘಾತಗಳ ಆತಂಕ ಎದುರಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರ್ಯಾಯ ರಸ್ತೆಯಲ್ಲಿ ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

























Leave a Comment

Your email address will not be published. Required fields are marked *

error: Content is protected !!
Scroll to Top