ಮೊಸಳೆ ದಾಳಿಯೇ ಮಹಿಳೆಗೆ ಮರುಜನ್ಮ ನೀಡಿತೇ? ಕುಮಾರಧಾರಾ ನದಿಯಲ್ಲಿ ರೋಚಕ ಘಟನೆ!

ಸುಬ್ರಹ್ಮಣ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರಾ ನದಿಗೆ ಹಾರಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿದ ಪರಿಣಾಮ, ಜೀವಭಯದಿಂದ ಆಕೆ ಕೂಗಿಕೊಂಡು ಸ್ಥಳೀಯರ ಗಮನ ಸೆಳೆದು ಪ್ರಾಣಾಪಾಯದಿಂದ ಪಾರಾದ ಅಚ್ಚರಿಯ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನವೆಂಬರ್ 4ರ ತಡರಾತ್ರಿ ನಡೆದಿದೆ.



























ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಮನಸ್ತಾಪದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತಡರಾತ್ರಿ ಕುಮಾರಧಾರಾ ಸೇತುವೆಯ ಮೇಲಿಂದ ನದಿಗೆ ಹಾರಿದ್ದರು ಎನ್ನಲಾಗಿದೆ.

ನದಿಗೆ ಹಾರಿದ ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ. ಆತ್ಮಹತ್ಯೆ ಉದ್ದೇಶದಿಂದ ನದಿಗೆ ಹಾರಿದ್ದ ಮಹಿಳೆಗೆ ಮೊಸಳೆಯ ದಾಳಿ ಅನಿರೀಕ್ಷಿತ ಆಘಾತ ತಂದಿದ್ದು, ತೀವ್ರ ನೋವು ಹಾಗೂ ಜೀವಭಯದಿಂದ ನದಿಯ ಮಧ್ಯದಲ್ಲೇ ಜೋರಾಗಿ ಚೀರಾಡಿ ಬೊಬ್ಬೆ ಹೊಡೆಯಲಾರಂಭಿಸಿದ್ದಾರೆ.

ಮಹಿಳೆಯ ಆಕ್ರಂದನ ಕೇಳಿದ ಸೇತುವೆ ಪಕ್ಕದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಟಾರ್ಚ್‌ಗಳ ಬೆಳಕಿನೊಂದಿಗೆ ನದಿಯ ದಂಡೆಗೆ ಧಾವಿಸಿದ ಅವರು ಮಹಿಳೆಯ ಕೂಗಾಟದ ದಿಕ್ಕಿನತ್ತ ಗಮನಹರಿಸಿದ್ದಾರೆ.

ಈ ನಡುವೆ ಮಹಿಳೆಯ ನಿರಂತರ ಚೀರಾಟ ಹಾಗೂ ಸ್ಥಳೀಯರ ಚಲನವಲನದಿಂದ ಗಾಬರಿಗೊಂಡ ಮೊಸಳೆ ಆಕೆಯನ್ನು ಬಿಟ್ಟು ನೀರಿನೊಳಗೆ ಮರೆಯಾಗಿದೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ನೀರಿನಿಂದ ಸುರಕ್ಷಿತವಾಗಿ ಹೊರತೆಗೆದು ದಂಡೆಗೆ ಕರೆತಂದಿದ್ದಾರೆ.

ಸಾವಿನ ದವಡೆಯಿಂದ ಬದುಕಿನತ್ತ!

ನದಿಗೆ ಹಾರಿದ ಮಹಿಳೆ ಮೊಸಳೆಯ ದಾಳಿಗೆ ಸಿಲುಕಿದರೂ, ಅದೇ ಘಟನೆ ಆಕೆಯ ಜೀವ ಉಳಿಯಲು ಕಾರಣವಾಯಿತು ಎಂಬುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಮೊಸಳೆ ಕಚ್ಚಿದ ನೋವು ಮತ್ತು ಭಯದಿಂದ ಆಕೆ ಕೂಗಿಕೊಂಡ ಪರಿಣಾಮ ಸ್ಥಳೀಯರಿಗೆ ಘಟನೆ ತಿಳಿದು, ತಕ್ಷಣ ರಕ್ಷಣೆಗೆ ಧಾವಿಸಲು ಸಾಧ್ಯವಾಯಿತು.

ಒಂದು ಕ್ಷಣದ ಅನಿರೀಕ್ಷಿತ ಘಟನೆ ಮಹಿಳೆಯ ಬದುಕಿನಲ್ಲಿ ಮತ್ತೊಂದು ಅವಕಾಶ ಕಲ್ಪಿಸಿದಂತಾಗಿದೆ. ಆತ್ಮಹತ್ಯೆಯ ನಿರ್ಧಾರದಿಂದ ನದಿಗೆ ಹಾರಿದ್ದ ಮಹಿಳೆ, ಮೊಸಳೆಯ ದಾಳಿಯ ನಡುವೆಯೂ ಬದುಕುಳಿದಿರುವುದು ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಚರ್ಚೆಗೆ ಕಾರಣವಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top