ಅಂದು ಹಣತೆಯ ಬೆಳಕು… ಇಂದು ಆಧುನಿಕತೆಯ ಹೊಳಪು; ಬದಲಾಗದ ದೀಪಾವಳಿಯ ಸಂಭ್ರಮ!

✍️  *ಚರಣ್*
ಎಂ.ಸಿ.ಜೆ  ದ್ಚಿತೀಯ ವರ್ಷ
*ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ಅದು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ನಿರಾಶೆಯಿಂದ ಹೊಸ ಭರವಸೆಯೆಡೆಗೆ ಸಾಗುವ ಜೀವನದ ಸಂಭ್ರಮ. ತಲೆಮಾರುಗಳಿಂದ ನಡೆದು ಬಂದಿರುವ ಈ ಹಬ್ಬದ ಆಚರಣೆಯಲ್ಲಿ ಕಾಲ ಬದಲಾದಂತೆ ಹಲವು ಬದಲಾವಣೆಗಳಾಗಿದ್ದರೂ, ಅದರ ಹಿಂದಿರುವ ಭಕ್ತಿ, ನಂಬಿಕೆ ಮತ್ತು ಸಡಗರ ಇಂದಿಗೂ ಜೀವಂತವಾಗಿದೆ*.





































































ಅಂದು ದೀಪಾವಳಿ ಎಂದರೆ ಆತ್ಮೀಯತೆಯ ಹಬ್ಬವಾಗಿತ್ತು. ಮನೆಗಳ ಅಂಗಳವನ್ನು ಸ್ವಚ್ಛಗೊಳಿಸಿ, ಸಗಣಿಯಿಂದ ಸಾರಿಸಿ, ರಂಗೋಲಿ ಬಿಡಿಸಿ, ಮಣ್ಣಿನ ಹಣತೆಗಳಿಗೆ ಎಣ್ಣೆ ತುಂಬಿ ಬತ್ತಿ ಹಾಕಿ ದೀಪ ಬೆಳಗಿಸುವ ಸಂಭ್ರಮವೇ ವಿಶೇಷವಾಗಿತ್ತು. ಮನೆಯ ಹಿರಿಯರು ಮಕ್ಕಳಿಗೆ ದೀಪಾವಳಿಯ ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದರು. ನರಕ ಚತುರ್ದಶಿಯ ಎಣ್ಣೆ ಸ್ನಾನ, ತುಳಸಿ ಪೂಜೆ, ಗೋಪೂಜೆ, ಬಲೀಂದ್ರ ಪೂಜೆ, ಬಲೀಂದ್ರ ಮರದ ಆರಾಧನೆ ಹೀಗೆ ಪ್ರತಿಯೊಂದು ಆಚರಣೆಯಲ್ಲೂ ಧಾರ್ಮಿಕ ನಂಬಿಕೆ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ ಅಡಕವಾಗಿತ್ತು.

ಹಳ್ಳಿಗಳಲ್ಲಿ ದೀಪಾವಳಿ ಎಂದರೆ ಮನೆಮಂದಿಯೆಲ್ಲ ಒಟ್ಟಾಗಿ ಸೇರುವ ಸುಂದರ ಸಂದರ್ಭ. ಹೊಸ ಬಟ್ಟೆ ಧರಿಸುವುದು, ಸಿಹಿತಿಂಡಿ ತಯಾರಿಸುವುದು, ನೆರೆಹೊರೆಯವರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳುವುದು, ಹಿರಿಯರ ಆಶೀರ್ವಾದ ಪಡೆಯುವುದು ಹಬ್ಬದ ಅವಿಭಾಜ್ಯ ಅಂಗವಾಗಿತ್ತು. ಪಟಾಕಿಗಳ ಅಬ್ಬರಕ್ಕಿಂತ ಹಣತೆಯ ಬೆಳಕು, ಕುಟುಂಬದ ಒಡನಾಟ ಮತ್ತು ಸಂಪ್ರದಾಯದ ಸೊಗಡಿಗೆ ಹೆಚ್ಚಿನ ಮಹತ್ವವಿತ್ತು.

ಇಂದು ದೀಪಾವಳಿಯ ಸ್ವರೂಪ ಬದಲಾಗಿದೆ. ವಿದ್ಯುತ್ ದೀಪಗಳ ಅಲಂಕಾರ, ಬಣ್ಣಬಣ್ಣದ ಸರಣಿ ದೀಪಗಳು, ಆಕರ್ಷಕ ಪಟಾಕಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ವಿನಿಮಯ, ಆಧುನಿಕ ಉಡುಗೆ-ತೊಡುಗೆಗಳೊಂದಿಗೆ ಹಬ್ಬದ ಸಂಭ್ರಮ ಹೊಸ ಆಯಾಮ ಪಡೆದುಕೊಂಡಿದೆ. ನಗರಗಳಿಂದ ಹಿಡಿದು ಹಳ್ಳಿಗಳವರೆಗೆ ದೀಪಾವಳಿ ವೈಭವದಿಂದ ಆಚರಿಸಲ್ಪಡುತ್ತಿದೆ. ಆದರೆ ಈ ಆಧುನಿಕ ಸಂಭ್ರಮದ ನಡುವೆ ಕೆಲವು ಸಾಂಪ್ರದಾಯಿಕ ಆಚರಣೆಗಳು ನಿಧಾನವಾಗಿ ಮರೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿ.

ಕಾಲ ಬದಲಾದರೂ ದೀಪಾವಳಿಯ ಮೂಲ ಆಶಯ ಬದಲಾಗಬಾರದು. ಹಣತೆಯ ಬೆಳಕು ಮನೆ ಮಾತ್ರವಲ್ಲ, ಮನಸ್ಸನ್ನೂ ಬೆಳಗಿಸಬೇಕು. ದ್ವೇಷ, ಅಸೂಯೆ, ಅಹಂಕಾರಗಳನ್ನು ದೂರ ಮಾಡಿ ಪ್ರೀತಿ, ವಿಶ್ವಾಸ, ಸಹಬಾಳ್ವೆ ಮತ್ತು ಮಾನವೀಯತೆಯನ್ನು ಬೆಳೆಸುವ ಹಬ್ಬವಾಗಬೇಕು.

ಇಂದಿನ ಮಕ್ಕಳಿಗೆ ದೀಪಾವಳಿಯ ನಿಜವಾದ ಅರ್ಥವನ್ನು ಪರಿಚಯಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಪಟಾಕಿ ಸಿಡಿಸುವುದಷ್ಟೇ ದೀಪಾವಳಿಯಲ್ಲ, ಬದಲಾಗಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿಯನ್ನು ಗೌರವಿಸುವುದೂ ಹಬ್ಬದ ಭಾಗ ಎಂಬ ಅರಿವು ಮೂಡಿಸಬೇಕಿದೆ.

ಅಂದು ಮಣ್ಣಿನ ಹಣತೆಯಲ್ಲಿ ಬೆಳಗಿದ ಬೆಳಕು ಇಂದು ವಿದ್ಯುತ್ ದೀಪಗಳ ರೂಪದಲ್ಲಿ ಮನೆಮಾಡಿರಬಹುದು. ಆದರೆ ಆ ಹಣತೆಯ ಹಿಂದಿನ ಭಾವನೆ, ಕುಟುಂಬದ ಪ್ರೀತಿ, ಹಿರಿಯರ ಆಶೀರ್ವಾದ ಮತ್ತು ಸಂಪ್ರದಾಯದ ಮೌಲ್ಯಗಳು ಎಂದಿಗೂ ಆರಿಹೋಗಬಾರದು.

ಹಬ್ಬಗಳು ಕೇವಲ ಆಚರಣೆಗಳಾಗಿ ಉಳಿಯದೆ, ನಮ್ಮ ಸಂಸ್ಕೃತಿಯ ಬೇರುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಸೇತುವೆಗಳಾಗಲಿ. ಅಂದು ದೀಪಾವಳಿ ನೀಡಿದ ಆತ್ಮೀಯತೆ, ಇಂದು ತಂತ್ರಜ್ಞಾನದ ಬೆಳಕಿನಲ್ಲೂ ಉಳಿಯಲಿ. ಪ್ರತಿಯೊಂದು ಮನೆಯಲ್ಲೂ ದೀಪ ಬೆಳಗುವಂತೆ ಪ್ರತಿಯೊಂದು ಹೃದಯದಲ್ಲೂ ಮಾನವೀಯತೆಯ ಬೆಳಕು ಸದಾ ಪ್ರಜ್ವಲಿಸಲಿ.

Leave a Comment

Your email address will not be published. Required fields are marked *

error: Content is protected !!
Scroll to Top