ಪಂಜ: ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.9ರಂದು ಸಂಜೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಜರುಗಿದವು.
ದೀಪಾವಳಿಯ ವಿಶೇಷ ಸಂಪ್ರದಾಯದಂತೆ ದೇವಸ್ಥಾನದ ಸನ್ನಿಧಿಯಲ್ಲಿ ಬಲೀಂದ್ರ ಮರವನ್ನು ಹಾಕಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ಬಳಿಕ ತುಳಸಿ ಪೂಜೆ ಹಾಗೂ ಗೋಪೂಜೆ ನೆರವೇರಿಸಲಾಯಿತು. ದೀಪಗಳ ಬೆಳಕು, ಮಂತ್ರಘೋಷ ಹಾಗೂ ಭಕ್ತರ ಭಜನೆ-ಪ್ರಾರ್ಥನೆಗಳೊಂದಿಗೆ ದೇವಸ್ಥಾನದ ಪರಿಸರದಲ್ಲಿ ಪವಿತ್ರ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಭಕ್ತರು ಭಕ್ತಿಪೂರ್ವಕವಾಗಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಯಿಲಪ್ಪ ಗೌಡ ಎಣ್ಣೂರು, ಸಂತೋಷ್ ಕುಮಾರ್ ರೈ ಬಳ್ಳ, ಧರ್ಮಣ್ಣ ನಾಯ್ಕ ಗರಡಿ, ಮಾಲಿನಿ ಕುದ್ದ, ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಕುದ್ವ ಸೇರಿದಂತೆ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ಪೂಜಾ ಕಾರ್ಯಕ್ರಮದ ಬಳಿಕ ಭಕ್ತಾದಿಗಳು ದೇವರ ಪ್ರಸಾದ ಸ್ವೀಕರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ದೀಪಾವಳಿಯ ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಭಕ್ತಿಯ ಸೊಬಗನ್ನು ಸಾರಿದ ಈ ಆಚರಣೆ ಭಕ್ತರ ಮನದಲ್ಲಿ ಆಧ್ಯಾತ್ಮಿಕ ಸಂತಸ ಮೂಡಿಸಿತು.






































