ಸುಳ್ಯ: ಕೇಂದ್ರ ಸರ್ಕಾರದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ನೀತಿಯನ್ನು ಖಂಡಿಸಿ ಎಸ್ಕೆಎಸ್ಎಸ್ಎಫ್ ಸಂಘಟನೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಅಂಗವಾಗಿ ಸುಳ್ಯ ವಲಯ ಸಮಿತಿಯ ವತಿಯಿಂದ ನ.13ರಂದು ಸಂಜೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಬಿಜೆಪಿ ಬೆಂಬಲಿತ ಕೇಂದ್ರ ಸರ್ಕಾರ ಎಸ್ಐಆರ್ ಮೂಲಕ ತಪ್ಪು ಮಾಹಿತಿ ನೀಡಿ ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ವಂಚಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ವಿರೋಧಿ ಹಾಗೂ ಜಾತ್ಯತೀತ ನಿಲುವು ಹೊಂದಿರುವವರನ್ನು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರಕ್ರಿಯೆಗೆ ಕಾರಣರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಳ್ಯ ವಲಯ ಸಮಿತಿ ಅಧ್ಯಕ್ಷ ಅಕ್ಬರ್ ಕರಾವಳಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಎಸ್ಕೆಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿ ಯಾಸಿರ್ ಅರಫಾತ್ ಕೌಸರಿ, ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿದರು.
ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗುತ್ತಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳಿಗೆ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ., ಎಸ್ಕೆಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಬ್ದುಲ್ಲಾ ಫೈಝಿ ಪೈಂಬೆಚಾಲು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಖಾದರ್ ಮೊಟ್ಟೆಂಗಾರ್, ಸುಳ್ಯ ವಲಯ ಕೋಶಾಧಿಕಾರಿ ಯು.ಪಿ. ಬಶೀರ್ ಬೆಳ್ಳಾರೆ, ಮುಖಂಡರಾದ ಅಬೂಬಕ್ಕರ್ ಪೂಪಿ ಕನಕಮಜಲು ಹಾಗೂ ಶಾಫಿ ದಾರಿಮಿ ಮಾತನಾಡಿ ಎಸ್ಐಆರ್ ಪ್ರಕ್ರಿಯೆಯಲ್ಲಿನ ಅಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಎಸ್ಎಂಎ ಅಧ್ಯಕ್ಷ ಹಾಜಿ ಹಮೀದ್, ನಗರ ಪಂಚಾಯತ್ ಮಾಜಿ ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಮುಖಂಡರಾದ ಸಲೀಂ ಪೆರುಂಗೋಡಿ, ತಾಜ್ ಮಹಮ್ಮದ್ ಸಂಪಾಜೆ, ಜಿ.ಕೆ. ಹಮೀದ್ ಗೂನಡ್ಕ, ಎಸ್.ಕೆ. ಹನೀಫ, ಇರ್ಷಾದ್ ಬದ್ರಿಯಾ, ಅಡ್ವಕೇಟ್ ಮೂಸಾ ಪೈಂಬೆಚಾಲು ಸೇರಿದಂತೆ ವಲಯದ ವಿವಿಧ ಕ್ಲಸ್ಟರ್ಗಳ ಪದಾಧಿಕಾರಿಗಳು, ಸದಸ್ಯರು, ಎಸ್ಜೆಎಂ ಮುಖಂಡರು ಹಾಗೂ ವಿಖಾಯ ತಂಡದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸುಳ್ಯ ವಲಯ ಚೇರ್ಮೆನ್ ಇಕ್ಬಾಲ್ ಸುಣ್ಣಮೂಲೆ ಸ್ವಾಗತಿಸಿ, ಮುಹಿನುದ್ದೀನ್ ಫೈಝಿ ಕಾರ್ಯಕ್ರಮ ನಿರೂಪಿಸಿದರು. ಖಾದರ್ ಮೊಟ್ಟೆಂಗಾರ್ ವಂದಿಸಿದರು.
ಸಭೆಯ ಬಳಿಕ ಪ್ರತಿಭಟನಾಕಾರರು ಸುಳ್ಯ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.






































