ವಿಟ್ಲ, ನ. 12: ಐಸಿಎಆರ್-ಡಿಸಿಆರ್, ಪುತ್ತೂರು, ಆರ್‌ಕೆವಿವೈ-ರಫ್ತಾರ್ ಯೋಜನೆ, ಕರ್ನಾಟಕ ಸರ್ಕಾರ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (FPC) ಇವರ ಸಂಯುಕ್ತ ಆಶ್ರಯದಲ್ಲಿ ವಿಟ್ಲದಲ್ಲಿ “ಗೇರು ಸ್ಪೆಷಲ್” ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿತು.
ಭಾರತ ದೇಶದಲ್ಲಿ ಮೊದಲ ಬಾರಿಗೆ ಗೇರು ಮರದ ಚಿಗುರು ಮತ್ತು ಹೂಗಳಿಗೆ ಸಿಂಪಡಿಸುವ ತಂತ್ರಜ್ಞಾನವನ್ನು ಈ ಕಾರ್ಯಕ್ರಮದಲ್ಲಿ ಡಾ. ದಿನಕರ ಅಡಿಗ ನಿರ್ದೇಶಕರು ಐಸಿಎಆರ್ -ಡಿಸಿಆರ್ ಪುತ್ತೂರು ಇವರು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಐ ಸಿ ಎ ಆರ್ – ಡಿ ಸಿ ಆರ್ ನಿರ್ದೇಶಕರಾದ ಡಾಕ್ಟರ್ ದಿನಕರ್ ಅಡಿಗ, ವಿಜ್ಞಾನಿಗಳಾದ ಡಾ.ವೀಣಾ ಜಿ ಎಲ್, ಡಾ. ಅಶ್ವತಿ ಚಂದ್ರಶೇಖರ್, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪನ ನಿರ್ದೇಶಕರಾದ ಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಐಸಿಎಆರ್-ಡಿಸಿಆರ್ ಪುತ್ತೂರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಗೇರು ಬೆಳೆಯಲ್ಲಿ ಚಿಗುರು ಹಾಗೂ ಹೂ ಉದುರುವ ಸಮಸ್ಯೆಯನ್ನು ತಡೆದು, ಹೆಚ್ಚಿನ ಕಾಯಿ ಕಚ್ಚಲು ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ಸಿಬ್ಬಂದಿಗಳು, ಹಾಗೂ ಗೇರು ಬೆಳೆಗಾರರು ಭಾಗವಹಿಸಿದ್ದರು. ವಿಜ್ಞಾನಿಗಳು ರೈತರಿಗೆ “ಗೇರು ಸ್ಪೆಷಲ್” ಬಳಕೆಯ ವಿಧಾನ, ಸಿಂಪಡಿಸುವ ಸಮಯ, ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಗೇರು ಬೆಳೆಯು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಹೊಸ ತಂತ್ರಜ್ಞಾನದಿಂದ ರೈತರಿಗೆ ಹೆಚ್ಚಿನ ಇಳುವರಿ ಹಾಗೂ ಅಧಿಕ ಆದಾಯ ದೊರೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ಹಾಗೂ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ವತಿಯಿಂದ ವಿಟ್ಲದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸ್ವಾಗತ, ನಿರೂಪಣೆ ಹಾಗೂ ಧನ್ಯವಾದವನ್ನು ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ನಿರ್ವಹಿಸಿದರು.






































