ಆಲೆಟ್ಟಿಯಲ್ಲಿ ಭೀಕರ ಗಾಳಿ ಮಳೆ ಅವಾಂತರ: ಮನೆಯ ಮೇಲೆ ಬೃಹತ್ ಮರ ಬಿದ್ದು ಮನೆ ಸಂಪೂರ್ಣ ಧ್ವಂಸ; ಆರು ಮಂದಿಗೆ ಗಾಯ

ಅರಂತೋಡು, ನ. 26 : : ಆಲೆಟ್ಟಿ ಗ್ರಾಮದ ಚಳ್ಳಂಗಾರು ಎಂಬಲ್ಲಿ ನ.25ರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.









































































ಚಳ್ಳಂಗಾರು ನಿವಾಸಿ ದೇವಿದಾಸ ಅವರ ಮನೆಗೆ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಎಡಭಾಗದಲ್ಲಿದ್ದ ಬೃಹತ್ ಗಾತ್ರದ ಶಾಂತಿ ಮರ ಇದ್ದಕ್ಕಿದ್ದಂತೆ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ದೇವಿದಾಸ, ಅವರ ಪತ್ನಿ ಪೂರ್ಣಿಮಾ, ತಾಯಿ ಕುಸುಮಾವತಿ, ತಂಗಿ ಅನಿತಾ, ಪುತ್ರಿ ಸುಶ್ಮಿತಾ ಹಾಗೂ ಸುಶ್ಮಿತಾ ಅವರ ಒಂದು ವರ್ಷದ ಗಂಡು ಮಗು ಮಲಗಿದ್ದರು. ಏಕಾಏಕಿ ಮರ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆಯೊಳಗಿದ್ದವರು ಗಾಯಗೊಂಡಿದ್ದಾರೆ.

ಆ ಸಮಯದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಮರ ಬಿದ್ದ ಶಬ್ದ ಅಕ್ಕಪಕ್ಕದ ಮನೆಯವರಿಗೆ ಕೇಳಿಸಿರಲಿಲ್ಲ ಎನ್ನಲಾಗಿದೆ. ಘಟನೆಯ ಬಳಿಕ ದೇವಿದಾಸ ಅವರು ನೆರೆಯ ಮನೆಯವರಾದ ಕಾರ್ತಿಕ್ ಹಾಗೂ ಸಮೀಪದ ನಿವಾಸಿಗಳಾದ ಬಾಬು, ವಿಶ್ವನಾಥ ಮತ್ತು ದರ್ಶನ್ ಅವರ ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಮನೆಯೊಳಗೆ ಸಿಲುಕಿದ್ದ ಒಂದು ವರ್ಷದ ಮಗು ಸಹಿತ ಎಲ್ಲರನ್ನೂ ಹೊರಗೆ ಕರೆತರುವಲ್ಲಿ ಸಹಕರಿಸಿದ್ದಾರೆ.

ಬಳಿಕ ಕಾರ್ತಿಕ್ ಅವರ ಕಾರಿನಲ್ಲಿ ಗಾಯಾಳುಗಳನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈದ್ಯರ ಸಲಹೆಯಂತೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ದೇವಿದಾಸ ಅವರ ಪುತ್ರಿ ಸುಶ್ಮಿತಾ ಅವರಿಗೆ ಭುಜ ಹಾಗೂ ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಉಳಿದವರಿಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ಕಳೆದುಕೊಂಡ ಸಂಕಷ್ಟ

ದೇವಿದಾಸ ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದ ಕುಟುಂಬವಾಗಿದ್ದು, ಅವರ ಪುತ್ರ ವಿಶ್ಲೇಶ್ ಕಾರು ಚಾಲಕ ವೃತ್ತಿ ನಿರ್ವಹಿಸುತ್ತಿದ್ದರೆ, ಮತ್ತೋರ್ವ ಪುತ್ರ ಯಕ್ಷಿತ್ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಗಾಳಿ ಮಳೆಗೆ ಮನೆ ಸಂಪೂರ್ಣ ಧ್ವಂಸಗೊಂಡಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

error: Content is protected !!
Scroll to Top