ಚಾಂದ್ರಮಾನ ಯುಗಾದಿ – ಸಂಪ್ರದಾಯ, ಸಂಸ್ಕೃತಿ ಮತ್ತು ನವಚೈತನ್ಯದ ಹಬ್ಬ

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಜೀವನದ ಅವಿಭಾಜ್ಯ ಅಂಗ. ಅವು ಕೇವಲ ಸಂಭ್ರಮ-ಸಡಗರಕ್ಕೆ ಮಾತ್ರ ಸೀಮಿತವಾಗದೆ, ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಅಂತಹ ಹಬ್ಬಗಳಲ್ಲಿ ಯುಗಾದಿ ವಿಶೇಷ ಸ್ಥಾನವನ್ನು ಹೊಂದಿದೆ.
“ಯುಗ + ಆದಿ” ಎಂಬ ಪದಗಳಿಂದ ರೂಪುಗೊಂಡ ಯುಗಾದಿ, ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ವಸಂತ ಋತುವಿನಲ್ಲಿ ಬರುವ ಈ ಹಬ್ಬ ಪ್ರಕೃತಿಯ ನವಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಮರಗಳು ಚಿಗುರಿ, ಹೂವು-ಹಣ್ಣುಗಳಿಂದ ಹಸಿರಾಗಿ ಕಂಗೊಳಿಸುವ ಈ ಕಾಲ ನಮ್ಮ ಬದುಕಿನಲ್ಲಿಯೂ ಹೊಸ ಉತ್ಸಾಹ ಮತ್ತು ಆಶಾವಾದವನ್ನು ತುಂಬುತ್ತದೆ.
ಯುಗಾದಿಯ ಸಂಭ್ರಮದಲ್ಲಿ “ಬೇವು-ಬೆಲ್ಲ” ಸೇವನೆಗೆ ವಿಶೇಷ ಮಹತ್ವವಿದೆ. ಬೆವು ಕಹಿಯನ್ನು, ಬೆಲ್ಲ ಸಿಹಿಯನ್ನು ಸೂಚಿಸುತ್ತದೆ. ಇದು ಜೀವನದಲ್ಲಿ ಸುಖ-ದುಃಖ ಎರಡೂ ಸಹಜವೆಂಬ ಸಂದೇಶವನ್ನು ಸಾರುತ್ತದೆ. ಸಿಹಿ-ಕಹಿ ಅನುಭವಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುವುದೇ ಯುಗಾದಿಯ ಮೂಲ ಉದ್ದೇಶವಾಗಿದೆ.
ಈ ದಿನ “ಪಂಚಾಂಗ ಶ್ರವಣ”ಕ್ಕೂ ಮಹತ್ವ ನೀಡಲಾಗುತ್ತದೆ. ಹೊಸ ಸಂವತ್ಸರದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಇದು ಹೆಚ್ಚಿಸುವುದರ ಜೊತೆಗೆ, ಜೀವನದಲ್ಲಿ ಹೊಸ ಚಿಂತನೆಗಳೊಂದಿಗೆ ಹೊಸ ಯೋಜನೆಗಳನ್ನು ರೂಪಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ.
ಹಬ್ಬದ ಸಂದರ್ಭದಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೋರಣ ಕಟ್ಟುವುದು, ರಂಗೋಲಿ ಹಾಕುವುದು, ಹೊಸ ಬಟ್ಟೆ ಧರಿಸುವುದು, ದೇವರ ಪೂಜೆ ಸಲ್ಲಿಸುವುದು ಹಾಗೂ ಸಿಹಿ ಭೋಜನವನ್ನು ಹಂಚಿಕೊಳ್ಳುವುದು—ಈ ಎಲ್ಲಾ ಆಚರಣೆಗಳು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಪರಾಭವ ಸಂವತ್ಸರದ ಯುಗಾದಿ ಹೊಸ ಚಿಂತನೆ, ಹೊಸ ಗುರಿ ಮತ್ತು ಹೊಸ ಸಂಕಲ್ಪಗಳಿಗೆ ಪ್ರೇರಣೆಯಾಗಲಿ. ಹಳೆಯ ತಪ್ಪುಗಳನ್ನು ತಿದ್ದಿಕೊಂಡು, ಹೊಸ ಕನಸುಗಳೊಂದಿಗೆ ಬದುಕಿನಲ್ಲಿ ಮುನ್ನಡೆಯುವ ಸಂಕಲ್ಪ ಕೈಗೊಳ್ಳುವ ಪವಿತ್ರ ದಿನವಾಗಲಿ.
✍️ಜೇಸಿ ಮೋಹನ್ ಚಂದ್ರ
ಉಪನ್ಯಾಸಕರು, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು



































































































Leave a Comment

Your email address will not be published. Required fields are marked *

error: Content is protected !!
Scroll to Top