ಪಾಡ್‌ಕಾಸ್ಟ್ ಒಂದರಲ್ಲಿ ಆಂಕರ್ ಅನುಶ್ರೀ ಮಾತಾಡಿದ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳನ್ನು ಅದರಲ್ಲೂ ಸೆಲೆಬ್ರಿಟಿ ಹೆಣ್ಣು ಮಕ್ಕಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಎಷ್ಟು ತುಚ್ಚವಾಗಿ ಕಾಮೆಂಟ್ ಮಾಡುತ್ತಾರೆ ಎಂಬುದನ್ನು ಅನುಶ್ರೀಯವರು ಹೇಳಿದ್ದರು. ಕೆಲವೊಂದು ಅನಾಗರಿಕ ಪದ ಬಳಕೆಗಳಿಂದ ಮನಸ್ಸಿಗಾಗುವ ಸಂಕಟವನ್ನು ವಿವರಿಸುತ್ತಾ ಫಿಸಿಕಲ್ ರೇಪ್‌ನಂತೆಯೇ ಮೆಂಟಲ್ ರೇಪ್ ಎಷ್ಟು ಕ್ರೂರವಾಗಿ ನಡೆಯುತ್ತಿದೆ ಎಂಬುದನ್ನು ಹೇಳಿದ್ದರು. ಅನುಶ್ರೀ ಹೇಳಿದ ಈ ಮಾತುಗಳು ಕೇವಲ ಅನುಶ್ರೀಗಷ್ಟೇ ಅಲ್ಲ, ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳಿಂದ ಹಿಡಿದು ಸಂಸ್ಕಾರವಂತ ಎಲ್ಲಾ ಮನಸ್ಸುಗಳಿಗೂ ತುಂಬಾ ನೋವಾಯಿತು.
ಹೌದು. ಮೆಂಟಲ್ ರೇಪ್ ಎಂಬುದು ಈ ಸಾಮಾಜಿಕ ಜಾಲತಾಣಗಳು ಬಂದಾಗಿನಿಂದ ಜಾಸ್ತಿಯಾಗಿದೆ. ಹೆಣ್ಣು ಮಕ್ಕಳಿಗೆ ತುಚ್ಚವಾಗಿ ಕಾಮೆಂಟ್‌ಗಳನ್ನು ಹಾಕುವುದು, ಅನಾಗರಿಕ ಭಾಷೆಯಲ್ಲಿ ಜರೆಯುವುದು, ಸಂಬಂಧಗಳನ್ನು ಕಟ್ಟುವುದು, ಸಂಬಂಧಗಳನ್ನು ಮುರಿದುಕೊಂಡದ್ದಕ್ಕಾಗಿ ಕೆಟ್ಟದಾಗಿ ಬೈಯುವುದು…ಅನಾಗರಿಕ ಸಮಾಜದ ಮನಸ್ಥಿತಿ ಎಂತದ್ದು ಎಂಬುದನ್ನು ತಿಳಿಸುತ್ತದೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಅವರನ್ನು ವರಿಸಿದ ರಶ್ಮಿಕಾ ಮಂದಣ್ಣ ಅವರು ಕರಾವಳಿ ಮೂಲದ ನಟನೊಂದಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಎಂಗೇಜ್ಮೆಂಟ್ ಮಾಡಿಕೊಂಡು ಬಳಿಕ ಸಂಬಂಧ ಮುರಿದು ಹೋಗಿತ್ತು. ಅಲ್ಲಿಂದ ರಶ್ಮಿಕಾ ಮಂದಣ್ಣ ಅನುಭವಿಸಿದ ಮಾನಸಿಕ ನೋವು ಬಹುಶಃ ಅವರಿಗಷ್ಟೇ ಗೊತ್ತಿರಬಹುದು. ಅವರಿಬ್ಬರ ನಡುವೆ ಸಂಬಂಧ ಮುರಿದುಕೊಳ್ಳುವಂತದ್ದು ಏನಾಗಿರಬಹುದು ಎಂಬುದು ಯಾರಿಗೂ ತಿಳಿದಿಲ್ಲ. ಬಲವಾದ ಕಾರಣಗಳು ಇಲ್ಲದೆ ಅದು ಘಟಿಸುವುದೂ ಇಲ್ಲ. ಕಾರಣವೇ ಗೊತ್ತಿಲ್ಲದವರೆಲ್ಲಾ ಆಕೆಯನ್ನು ಮನಬಂದಂತೆ ಹೀಯಾಳಿಸಿದರು. ಅತ್ಯಂತ ಕೆಟ್ಟ ಪದಗಳಲ್ಲಿ ಜರೆದರು. ಆಕೆ ಮಾತ್ರ ಅವೆಲ್ಲವನ್ನು ಮೆಟ್ಟಿನಿಂತು ಬಹು ಬೇಡಿಕೆಯ ನಟಿಯಾಗಿ ಬೆಳೆದು ನಿಂತರೆ, ಅನಾಗರಿಕ ಪದ ಬಳಕೆ ಮಾಡಿ ಆಕೆಯನ್ನು ತುಳಿಯಲು ನೋಡಿದವರೆಲ್ಲಾ ಇನ್ನೂ ಇಎಂಐ ಕಟ್ಟುತ್ತಲೇ ಇದ್ದಾರೆ.
ಇನ್ನು ಅನುಶ್ರೀ ವಿಷಯದಲ್ಲೂ ಇದೇ ಆಗಿದೆ. ಕಷ್ಟದಿಂದ ಬೆಳೆದು ನಿಂತು ಕನ್ನಡದ ಬಹು ಬೇಡಿಕೆಯ ನಿರೂಪಕಿಯಾಗಿ ಗುರುತಿಸಿಕೊಂಡವರು ಆಂಕರ್ ಅನುಶ್ರೀ. ಆದರೆ ಅವರ ಪ್ರತೀ ಸಾಧನೆಯ ಹಿಂದೆಯೂ ಏನಾದರೂ ಕತೆ ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟ ಕೆಲವೊಂದು ಕೊಳಕು ಮನುಷ್ಯರ ಮನಸ್ಥಿತಿ ಎಂತಹುದು ಎಂಬುದನ್ನು ಅವರು ತೆರೆದಿಟ್ಟಿದ್ದಾರೆ. ಡ***ರ್ ಎನ್ನುವ ಪದ ಬಳಕೆಯ ಬಗ್ಗೆ ಅನುಶ್ರೀ ತುಂಬಾ ನೊಂದು ಮಾತನಾಡಿದ್ದರು. ಬಹುಶಃ ಈ ಪದ ಬಳಕೆ ಅನೇಕ ಸೆಲೆಬ್ರಿಟಿಗಳನ್ನು ಕಾಡಿದ್ದಿದೆ. ವಿಕೃತ ಮನಸ್ಥಿತಿ, ಮನೆಯಲ್ಲಿನ ಸಂಸ್ಕಾರದ ಕೊರತೆ ಕೆಲವರಿಂದ ಇಂತಹವುಗಳನ್ನು ಹೇಳಿಸುತ್ತದೆ.
ಸಾಮಾಜಿಕ ಜಾಲತಾಣ ಆರಂಭಿಕ ದಿನಗಳಲ್ಲಿ ಕೆಲವು ವಿಕೃತ ಮನಸ್ಥಿತಿಗಳು ಕೆಲವು ಮಹಿಳಾ ನ್ಯೂಸ್ ಆಂಕರ್‌ಗಳನ್ನು ನ್ಯೂಸೂಳೆಗಳು ಎಂದು ಜರಿಯುತ್ತಿದ್ದನ್ನು ನೋಡಿದಾಗ ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳಿಗೂ ಘಾಸಿಯಾಗುತ್ತಿತ್ತು. ಅವರು ಓದುವ ಸುದ್ದಿ ತಮ್ಮ ಪಕ್ಷ, ಸಂಘಟನೆ, ಧರ್ಮದ ಪರವಾಗಿ ಇಲ್ಲ ಎಂದು ಅರಿವಾದಾಗ “ಸಂಸ್ಕೃತಿಯನ್ನೇ ಮೆರೆಸುವವರು ನಾವುʼ ಎಂಬ ಭ್ರಮೆಯಲ್ಲಿರುವವರಿಂದಲೇ ಇಂತಹ ಪದಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇನ್ನು ಕೆಲವು ಹೆಣ್ಣು ಮಕ್ಕಳ ಸಾಮಾಜಿಕ ಜಾಲತಾಣಗಳ ಅಕೌಂಟ್‌ನ ಮೆಸ್ಸೆಂಜರ್‌ನಲ್ಲಿ ವಿಕೃತ ಮನಸ್ಥಿತಿಗಳ ಮೆಸೇಜ್‌ಗಳು ಯಾವ ಮೆಂಟಲ್ ರೇಪ್‌ಗಳಿಗೂ ಕಡಿಮೆ ಇಲ್ಲದಂತಿರುತ್ತದೆ.
ಇನ್ನು ಸಾಮಾನ್ಯ ಹೆಣ್ಣು ಮಕ್ಕಳ ವಿಚಾರಕ್ಕೆ ಬರೋಣ. ಇಲ್ಲಂತೂ ಸಾಮಾಜಿಕ ಜಾಲತಾಣಗಳ ಆರಂಭಕ್ಕೂ ಮುನ್ನವೇ ಬಹು ಕ್ರೂರವಾಗಿತ್ತು ಈ ಮೆಂಟಲ್ ರೇಪ್, ಈಗಲೂ ಅಷ್ಟೇ ಕ್ರೂರವಾಗಿ ಮುಂದುವರಿಯುತ್ತಿದೆ. ಅಕ್ಕಪಕ್ಕದ ಮನೆಯವರು, ಸಂಬಂಧವೇ ಇಲ್ಲದವರಿಂದ ಮೆಂಟಲ್ ರೇಪ್ ನಡೆಯುತ್ತಲೇ ಇರುತ್ತದೆ. ಹೇಗಂತೀರಾ? ಸಮಾಜದ 99.99% ಹೆತ್ತವರಿಗೆ ತಮ್ಮ ಮಕ್ಕಳು ಮಾತ್ರ ಸರಿ, ಇನ್ನೊಬ್ಬರ ಮಕ್ಕಳು ಸರಿಯಿಲ್ಲ. ಬೇರೆಯವರ ಮಕ್ಕಳ ಪ್ರತೀ ನಡೆಗೂ ಕಮೆಂಟ್! ಆಕೆ ಸ್ಲೀವ್‌ಲೆಸ್ ಹಾಕಿದರೂ, ಆಕೆ ವೆಸ್ಟರ್ನ್ ಡ್ರೆಸ್ ಹಾಕಿದರೂ, ಆಕೆ ಮೇಕಪ್ ಮಾಡಿದರೂ, ಆಕೆ ಜಿಮ್ ಗೆ ಹೋದರೂ, ಆಕೆ ಚೆಂದನೆ ಶೃಂಗಾರಗೊಂಡಿದ್ದರೂ….ಆಕೆಯ ಪ್ರತಿ ನಡೆಯನ್ನು ಇನ್ನೊಬ್ಬರೊಂದಿಗೆ ಟೀಕಿಸಿ ಮಜಾ ತೆಗೆದುಕೊಳ್ಳುವವರು ಸರ್ವೇ ಸಾಮಾನ್ಯ. ಇದೆಲ್ಲಾ ಅನುಶ್ರೀ ಹೇಳಿದ ಮೆಂಟಲ್ ರೇಪ್ ವಿಚಾರದಡಿಯಲ್ಲೇ ಸೇರುತ್ತದೆ. ಇನ್ನೊಬ್ಬರು ಏನೇ ಮಾಡಿದರೂ ಅದು ಅವರು ದುಡಿದ ಹಣದಲ್ಲಿ ಮಾಡುತ್ತಾರೆ, ಆದರೆ ಸದಾ ಟೀಕಿಸುವ ಮಂದಿ ಅದನ್ನು ತಮ್ಮ ಜೇಬಿನಿಂದ ನೀಡಿದ ಹಣದಲ್ಲಿ ಆಕೆ ಐಶಾರಾಮಿ ಜೀವನ ನಡೆಸುತ್ತಿದ್ದಾಳೆ ಎಂಬಂತೆ ಭ್ರಮಿಸಿ ಟೀಕಿಸುತ್ತಾರೆ. ಎಂತಾ ವಿಪರ್ಯಾಸ ಅಲ್ಲವೇ?
ಈ ಟೀಕೆ ಎಂಬುದು ಸೆಲೆಬ್ರಿಟಿ ಹೆಣ್ಣು ಮಕ್ಕಳನ್ನೂ ಬಿಟ್ಟಿಲ್ಲ, ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳನ್ನೂ ಬಿಟ್ಟಿಲ್ಲ. ಸದಾ ಬೇರೆಯವರ ಬಟ್ಟಲಿನಲ್ಲಿ ನೊಣ ಹುಡುಕುವ ಕೆಟ್ಟ ಮನಸ್ಥಿತಿ ಕೆಲವರದ್ದು. ಇನ್ನೊಬ್ಬರ ಬಗ್ಗೆ ಯೋಚಿಸುತ್ತಾ ತಮಗೆ ಸರಿಯಾಗಿ ನಿದ್ದೆ ಹತ್ತದೆ ಅರ್ಧ ಆಯುಷ್ಯವನ್ನು ಇದರಲ್ಲೇ ಕಳೆದು ಬಿಡುತ್ತಾರೆ. ಸದಾ ಇನ್ನೊಬ್ಬರನ್ನು ಟೀಕಿಸುವ, ಅವರಿಗೆ ಅನಾಗರಿಕ ಪದಗಳಿಂದ ನಿಂದಿಸುವ ಮನಸ್ಥಿತಿಗಳೆಲ್ಲಾ ಅವರನ್ನು ಸಮಾಜದೆದುರು ಬೆತ್ತಲು ಮಾಡುತ್ತಾ ಹೋಗುತ್ತದೆಯೇ ಹೊರತು ಅವರನ್ನು ಮೆರೆಸುವುದಿಲ್ಲ. ಒಂದಿಲ್ಲೊಂದು ದಿನ ತಮ್ಮ ಕಾಲು ಬುಡಕ್ಕೂ ಬರುವಾಗಲೂ ಅರ್ಥವಾಗದಿದ್ದರೆ ಅವರು ಮನುಷ್ಯರಲ್ಲ.
ನಾನು 9ನೇ ತರಗತಿಯಲ್ಲಿದ್ದಾಗ ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮವಿತ್ತು. ಶಾಲೆಯ ಸಂಭ್ರಮಕ್ಕೆ ನಾವೂ ಸಂಭ್ರಮಿಸಬೇಕಲ್ಲವೇ? ಲಿಪ್‌ಸ್ಟಿಕ್ ಹಾಕಿ ಚಂದದ ಡ್ರೆಸ್ ಹಾಕಿ ಶಾಲೆಗೆ ಹೋಗುತ್ತಿದ್ದೆ. ನಮ್ಮ ತೀರಾ ಹತ್ತಿರದ ಮಹಿಳೆಯೊಬ್ಬರು ಆಕಡೆಯಿಂದ ಬರುತ್ತಿದ್ದರು. ಲಿಪ್‌ಸ್ಟಿಕ್ ಹಾಕಿದ್ದರ ಬಗ್ಗೆ ಬೇರೆಯವರಲ್ಲಿ ಅಪಸ್ವರವೆತ್ತಿದ್ದರು. ಸ್ಟೈಲ್ ಮಾಡಲು ಈಗಲೇ ಕಲಿತಿದ್ದಾಳೆ ಎಂದು ನನ್ನ ಹೆತ್ತವರನ್ನೂ ಎಳೆದು ತರಲು ಶುರುವಿಟ್ಟುಕೊಂಡರಂತೆ. ಅದನ್ನು ಕೇಳಿದ ಬಳಿಕ ಲಿಪ್‌ಸ್ಟಿಕ್ ಹಾಕುವುದನ್ನು ಬಿಟ್ಟ ನಾನು ಮತ್ತೆ ಲಿಪ್‌ಸ್ಟಿಕ್ ಹಾಕಲು ಶುರು ಮಾಡಿದ್ದು 2016ರಲ್ಲಿ ನನ್ನ ಚಿಕ್ಕಮ್ಮನ ಮಗಳ ಎಂಗೇಜ್ಮೆಂಟ್‌ನಲ್ಲಿ. ಅಂದರೆ ಸರಿ ಸುಮಾರು 11 ವರ್ಷಗಳ ಬಳಿಕ! ಕಾರಣ ನನ್ನ ಹೆತ್ತವರಿಗೆ ಕೆಟ್ಟ ಹೆಸರು ಬರಬಾರದು ಎಂದು. ಈಗೆಲ್ಲಾ ಇದನ್ನೆಲ್ಲ ನೆನೆದಾಗ ಎಂತೆಂತಾ ಕೆಟ್ಟ ಮನಸ್ಥಿತಿಗಳಿದ್ದವು, ಈಗಲೂ ಇವೆ ಎಂದು ನೋವಾಗುತ್ತದೆ. ಈಗಂತೂ ಅಂತ ಯಾವುದೇ ಹೆದರಿಕೆಗಳಿಲ್ಲ ಮತ್ತು ನಾನು ಸ್ವತಂತ್ರ ಹಕ್ಕಿ.
ಈ ಮೆಂಟಲ್ ರೇಪ್ ಎನ್ನುವಂತದ್ದು ಎಷ್ಟು ಘಾಸಿ ಮಾಡುತ್ತದೆ ಎಂಬುದು ಅನುಶ್ರೀಯವರಿಗಷ್ಟೇ ಅಲ್ಲ, ಪ್ರತೀ ಸಾಮಾನ್ಯ ಹೆಣ್ಣು ಮಕ್ಕಳಿಗೆ ಗೊತ್ತು. ಎಳವೆಯಲ್ಲಿ ಆಗುವಂತಹ ಇಂತಹ ಘಾಸಿಗಳು ಜೀವನಪೂರ್ತಿ ಮನಸ್ಸಿನಿಂದ ಹೋಗುವುದಿಲ್ಲ. ಸದಾ ಇನ್ನೊಬ್ಬರ ಜೀವನಶೈಲಿಯನ್ನು ಟೀಕಿಸುವುದರಿಂದ ಟೀಕಾಕಾರರಿಗೆ ಏನು ಸಿಗುತ್ತದೆಯೋ ಗೊತ್ತಿಲ್ಲ. ಕೆಲವರಿಗೆ ತಾವೂ, ತಮ್ಮವರನ್ನು ಬಿಟ್ಟರೆ ಲೋಕದ ಯಾವುದೇ ಹೆಣ್ಣು ಮಕ್ಕಳು ಸರಿ ಇಲ್ಲ. ಇನ್ನೊಂದು ಮನೆಯ ಹೆಣ್ಣು ಮಕ್ಕಳ ಹೆತ್ತವರಿಗಿಲ್ಲದ ತಲೆಬಿಸಿ ಓರಗೆಯವರಿಗೆ. ಈ ಮೆಂಟಲ್ ರೇಪ್‌ನ ಕ್ರೂರತೆಗೆ ಬಲಿಯಾದವರು ಹಲವು ಹೆಣ್ಣು ಮಕ್ಕಳು. ಬೇರೆ ಗಂಡಸರೊಂದಿಗೆ ಬೈಕ್‌ನಲ್ಲಿ ಹೋದರೂ ತಪ್ಪು, ಬೇರೆ ಗಂಡಸರನ್ನು ಕೆಲಸಕ್ಕಿಟ್ಟುಕೊಂಡರೂ ತಪ್ಪು, ಬೇರೆ ಗಂಡಸರೊಂದಿಗೆ ಮಾತನಾಡಿದರೂ ತಪ್ಪು, ಸದಾ ಫೋನ್‌ನಲ್ಲಿ ಮಾತನಾಡಿದರೂ ತಪ್ಪು. ಇಲ್ಲೆಲ್ಲಾ ತಪ್ಪು ಹುಡುಕುವವರ ವ್ಯಂಗ್ಯದ ಕಣ್ಣುಗಳು ಆ ಹೆಣ್ಣು ಮಕ್ಕಳ ನಿಜವಾದ ಉದ್ದೇಶವನ್ನು ಅರಿತಿರುವುದಿಲ್ಲ, ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬುದು ಕೇವಲ ಮಾತಷ್ಟೇ. ಇದನ್ನೆಲ್ಲಾ ಆಕೆಗೆ ಸಂಬಂಧ ಕಲ್ಪಿಸಿ ಬೇರೆಯವರೊಂದಿಗೆ ಉಸುರುವ ಈ ಮಂದಿ ಆಕೆಗೆ ಸದಾ ಮಾನಸಿಕ ಅತ್ಯಾಚಾರ ಎಸಗುತ್ತಲೇ ಇರುತ್ತಾರೆ. ಸದಾ ಇನ್ನೊಬ್ಬರನ್ನು ದೂರುವುದರಲ್ಲೇ ವಿಕೃತ ಆನಂದ. ಈ ಆನಂದವೇ ಮುಂದೊಂದು ದಿನ ʼಕರ್ಮ ರಿಟರ್ನ್ಸ್ʼ ಆಗುತ್ತದೆ. ಆಗ ಇನ್ನೊಬ್ಬರನ್ನು ದೂರಬಾರದಿತ್ತು ಎಂಬುದರ ಅರಿವಾಗುತ್ತದೆ. ಧನ್ಯಾ ಬಾಳೆಕಜೆ
ಆಂಕರ್ ಅನುಶ್ರೀ ಹೇಳಿದ ಮೆಂಟಲ್ ರೇಪ್ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ














































