ಭಜನೆಯ ಮೂಲಕ ಭಗವಂತನ ನಾಮಸ್ಮರಣೆ ಮಾಡುವುದಿಂದ ಮನಸ್ಸಿಗೆ ಶ್ರೇಷ್ಠ ಸುಖ ಸಿಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸುಳ್ಯ ಯೋಜನಾ ಕಚೇರಿಯ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ,ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್,ಸುಳ್ಯ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳಿಗೆ ಇಂದು ಧರ್ಮ ಮತ್ತು ಸಂಸ್ಕಾರ ಶಿಕ್ಷಣ ದ ಅಗತ್ಯ ಇದೆ. ಮಕ್ಕಳಿಗೆ ಭಜನೆ ಮಾಡಲು ಮನೆಯಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡಿ ಕೊಟ್ಟು ನಾವು ಅವರೊಂದಿಗೆ ಕುಳಿತು ಭಜನೆ ಮಾಡಬೇಕೆಂದು ಅವರು ಹೇಳಿದರು.
ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಅಧ್ಯಕ್ಷ ಸೋಮಶೇಖರ ಪೈಕ ಉದ್ಘಾಟಿಸಿ ಮಾತನಾಡಿ ಭಜನೆಗೆ ನಮ್ಮೇಲ್ಲರನ್ನು ಒಗ್ಗೂಡಿಸುವ ಶಕ್ತಿ.ಸಂಸ್ಕಾರಯುತ ಜೀವನಕ್ಕೆ ಭಜನೆ ಪೂರಕವಾಗಿದ್ದು ಮಕ್ಕಳ ಭಜನಾ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮಂಜುನಾಥೇಶ್ವರ ಭಜನಾ ಪರಿಷತ್‌ನ ನಿರ್ದೇಶಕ ಜಯಪ್ರಕಾಶ್ ಕಲ್ಲಪ್ಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಭಜನಾ ಪರಿಷತ್‌ನ ಗೌರವಾಧ್ಯಕ್ಷ ಯತೀಶ್ ರೈ ದುಗಲಡ್ಕ, ಕಾರ್ಯದರ್ಶಿ ಟಿ.ಎನ್.ಸತೀಶ್, ಸುಳ್ಯ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷ ಮನೋಹರ್ ಕೆ., ಉದ್ಯಮಿ ನಾರಾಯಣ ಕೇಕಡ್ಕ,ಶಶಿಕಲಾ ಹರಪ್ರಸಾದ್, ಭಾರತಿ ಪುರುಶೋತ್ತಮ ಅರಂತೋಡು, ನಳಿನಾಕ್ಷಿ ಕಲ್ಮಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಹಾರೈಸಿದರು. ಭಜನಾ ಕೈಪಿಡಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ವಲಯ ಮೇಲ್ವಿಚಾರಕ ದಿನೇಶ್ ಸ್ವಾಗತಿಸಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಸುಳ್ಯ ವಲಯದ ಅಧ್ಯಕ್ಷೆ ಸವಿತಾ ಸಂದೇಶ್ ವಂದಿಸಿದರು. ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ಕಾರ್ಯಕ್ರಮ ನಿರೂಪಿಸಿದರು.





















































