ಸುಳ್ಯ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಗೆ ಒಲಂಪಿಯಾಡ್ ಸಹಕಾರಿಯಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ದಕ್ಷಿಣ ಕನ್ನಡ 2 ಜಿಲ್ಲೆಯ ಬಾಬು ನಾಯ್ಕ ರವರು ಅಭಿಪ್ರಾಯಪಟ್ಟರು.
ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಒಲಂಪಿಯಾಡ್ 6.0 ಪರೀಕ್ಷೆ ಬರೆದು ಉತ್ತೀರ್ಣರಾದ ಒಟ್ಟು 335 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಯಾವುದೇ ಹುದ್ದೆಯನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾಗಿದ್ದು ಸಾಮಾನ್ಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಸಾಕಷ್ಟು ಪೂರ್ವ ತಯಾರಿ ಅಗತ್ಯವಿರುತ್ತದೆ. ಗಾಮಾಭಿವೃದ್ಧಿ ಯೋಜನೆಯ ಸಿ ಎಸ್ ಸಿ ಕೇಂದ್ರಗಳ ಮೂಲಕ 3 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣಿ ಮಾಡಿಸಿ, ಆನ್ ಲೈನ್ ಮೂಲಕ ಪರೀಕ್ಷೆ ಬರೆದು ಸರ್ಟಿಫಿಕೇಟ್ ಪಡೆಯಬಹುದು. ಇದರಿಂದ ಅತಿ
ಹೆಚ್ಚಿನ ಅಂಕಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಬಹುದಾಗಿದೆ.
ಒಲಂಪಿಯಾಡ್ ಕಾರ್ಯಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತಡ ರಹಿತ ವಾತಾವರಣ ರೂಪಿಸಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಡಿಜಿಟಲ್ ಮಾಧ್ಯಮದ ಮೂಲಭೂತ ತಿಳುವಳಿಕೆ ಪಡೆಯಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮಾಧವ ಗೌಡ,ಸಿ. ಎಸ್. ಸಿ ತಾಲೂಕು ನೋಡೆಲ್ ಅಧಿಕಾರಿ ಹೇಮಂತ್ ,ಎಲ್ಲಾ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುಳ್ಯ : ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಗೆ ಒಲಂಪಿಯಾಡ್ ಸಹಕಾರಿಯಾಗಲಿದೆ : ಬಾಬು ನಾಯ್ಕ
























































