ಸುಳ್ಯ: ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ಸುಳ್ಯ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರು ಕಚೇರಿಗೆ ಸಲ್ಲಿಸಲಾಗಿದ್ದ, ಮಾಹಿತಿ ಹಕ್ಕು ಅಧಿನಿಯಮ 2005 ರ ಕಾಯ್ದೆಯಡಿಯಲ್ಲಿ ಮಾಣಿ ಸಂಪಾಜೆ ರಸ್ತೆ ಅಲೈನ್ ಮೆಂಟ್ ಗೆ ಇನ್ನೂ ಸಚಿವಾಲಯದ ಅನುಮೋದನೆ ಇಲ್ಲ ಎಂದು ತಿಳಿಸಲಾಗಿದೆ.
ಕೆ.ಆರ್.ಎಸ್. ಸುಳ್ಯ ಘಟಕದ ಅಧ್ಯಕ್ಷ ಡಿ. ಎಂ. ಶಾರಿಖ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾದ ಮಾಹಿತಿಯ ಪ್ರಕಾರ, ಅನಧಿಕೃತವಾಗಿ ಅಗೆದಿರುವ ರಸ್ತೆಯನ್ನು ಯಥಾಸ್ಥಿತಿಗೆ ತಂದು ಸಾರ್ವಜನಿಕರಿಗೆ ಹಾಗೂ ವಾಹನಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮೇ 13ರಂದು ಸೂಚನೆ ನೀಡಲಾಗಿದೆ.ಇದೇ ವೇಳೆ, ರಾಷ್ಟ್ರೀಯ ಹೆದ್ದಾರಿ 275ರ 0.00ಕಿ.ಮೀ.ದಿಂದ 71.60 ಕಿ.ಮೀ. ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಗುತ್ತಿಗೆದಾರರನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಗುತ್ತಿಗೆದಾರರು ಸರ್ವೆ ಕಾರ್ಯ ಪೂರ್ಣಗೊಳಿಸಿ ಭೂಮಿಯ ಪ್ರೊಫೈಲ್ ವರದಿಯನ್ನು ಸಿದ್ಧಪಡಿಸಿ ಭಾರತ ಸರ್ಕಾರದ ಸಂಬಂಧಿತ ಇಲಾಖೆಗೆ ಸಲ್ಲಿಸಿದ್ದಾರೆ.ಆದಾಗ್ಯೂ, ರಸ್ತೆ ಅಲೈನ್‌ಮೆಂಟ್‌ಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಇನ್ನೂ ದೊರೆಯಬೇಕಿದ್ದು, ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಲೈನ್‌ಮೆಂಟ್‌ಗೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಿಂದ ಈವರೆಗೆ ಅನುಮೋದನೆ ಲಭಿಸಿಲ್ಲ ಎಂದು ಮಾಹಿತಿ ಹಕ್ಕಿನಡಿ ಸ್ಪಷ್ಟಪಡಿಸಲಾಗಿದೆ.

























































