ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಜಾ ಸೇವೆ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ, ಅವುಗಳನ್ನು ಸಕಾಲದಲ್ಲಿ ಪರಿಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಜಾಸೇವೆ ಅಭಿಯಾನ’ ಕ್ಕೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅವರು ಚಾಲನೆ ನೀಡಿ ಮಾತನಾಡಿದರು.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹೀದ್ ತೆಕ್ಕಿಲ್, “ಈ ಪ್ರಜಾಸೇವೆ ಅಭಿಯಾನ ಮತ್ತು ಹೊಸದಾಗಿ ರಚನೆಯಾಗಿರುವ ಪ್ರಜಾಸೇವೆ ಇಲಾಖೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸಾಗಿದೆ. ಸರ್ಕಾರದ ಸೇವೆಗಳು ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ”
ಸಾರ್ವಜನಿಕರು ಆಡಳಿತ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲೇ ಅಹವಾಲುಗಳನ್ನು ಆಲಿಸಿ ಕಾಲಮಿತಿಯಲ್ಲಿ ಪರಿಹರಿಸುವ ಯೋಜನೆ ಇದಾಗಿದ್ದು, ಆಡಳಿತಾತ್ಮಕ ಮತ್ತು ಅಭಿವೃದ್ಧಿ ಕಾಮಗಾರಿಗಳ ಶೀಘ್ರ ವಿಲೇವಾರಿಗಾಗಿ ಹೋಬಳಿ ಮಟ್ಟಕ್ಕೆ ₹50,000, ಜಿಲ್ಲಾ ಮಟ್ಟಕ್ಕೆ ₹1 ಲಕ್ಷ ಹಾಗೂ ಇತರ ಪ್ರಮುಖ ಯೋಜನೆಗಳಿಗೆ ₹5 ಲಕ್ಷ ವರೆಗೆ ಅನುದಾನದ ನಿಬಂಧನೆಗಳನ್ನು ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಇಲಾಖಾ ಅಧಿಕಾರಿಗಳು ಖಡ್ಡಾಯ ಹಾಜರಿರಬೇಕು : ಶಾಸಕಿ ಭಾಗೀರಥಿ




















