ಅ.2ರಂದು ಗಾಂಧಿ ಚಿಂತನ ವೇದಿಕೆಯಿಂದ ಗಾಂಧಿ ನಡಿಗೆ ಮತ್ತು ಗಾಂಧಿ ಚಿಂತನ ಕಾರ್ಯಕ್ರಮ

ಸುಳ್ಯ: ಗಾಂಧಿ ಚಿಂತನ ವೇದಿಕೆಯಿಂದ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ
ಸುಳ್ಯ, ಸೆ.20: ಸುಳ್ಯದ ಗಾಂಧಿ ಚಿಂತನ ವೇದಿಕೆಯ ವತಿಯಿಂದ ಅಕ್ಟೋಬರ್ 2ರಂದು ಗಾಂಧಿ ನಡಿಗೆ ಹಾಗೂ ಗಾಂಧಿ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವೇದಿಕೆಯ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ಈ ಬಾರಿ ಸುದ್ದಿ ಸಮೂಹ ಸಂಸ್ಥೆಯ ಮಾಲಕ, ವೈದ್ಯ, ಪತ್ರಕರ್ತ, ಪ್ರಖರ ಗಾಂಧಿವಾದಿ ಹಾಗೂ ಹೋರಾಟಗಾರ ಡಾ. ಯು.ಪಿ. ಶಿವಾನಂದ ಅವರಿಗೆ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಮತ್ತು ಸಂಚಾಲಕ ದಿನೇಶ್ ಮಡಪ್ಪಾಡಿ ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.2000ರ ಅಕ್ಟೋಬರ್ 2ರಂದು ಸ್ಥಾಪನೆಯಾದ ಸುಳ್ಯದ ಗಾಂಧಿ ಚಿಂತನ ವೇದಿಕೆ ಕಳೆದ 26 ವರ್ಷಗಳಿಂದ ಗಾಂಧೀಜಿಯವರ ತತ್ವ ಹಾಗೂ ಚಿಂತನೆಗಳ ಆಧಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಗಾಂಧಿ ನಡಿಗೆಯನ್ನು ನಿರಂತರವಾಗಿ ಸಂಘಟಿಸುತ್ತಾ ಬಂದಿದೆ. ವೇದಿಕೆಯ 25ನೇ ವರ್ಷದ ಸಂದರ್ಭದಲ್ಲಿ ಕಳೆದ ವರ್ಷದಿಂದ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ನೀಡಲು ಆರಂಭಿಸಲಾಗಿದ್ದು, ಮೊದಲ ಪ್ರಶಸ್ತಿಯನ್ನು ಸಹಕಾರಿ ಧುರೀಣ ಕೆ. ಸೀತಾರಾಮ ರೈ ಸವಣೂರು ಅವರಿಗೆ ನೀಡಿ ಗೌರವಿಸಲಾಗಿತ್ತು. ಈ ಬಾರಿ ಡಾ. ಯು.ಪಿ. ಶಿವಾನಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗಾಂಧಿ ಚಿಂತನೆ ಮೂಲಕ ಜನಜಾಗೃತಿ:
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಯು.ಪಿ. ಶಿವಾನಂದ ಅವರು ಕಳೆದ 45 ವರ್ಷಗಳಿಂದ ಗಾಂಧಿ ಚಿಂತನೆಯ ಆಧಾರದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ, ಮಾಹಿತಿ ಕ್ರಾಂತಿ ಹಾಗೂ ಗ್ರಾಮೀಣ ಪತ್ರಿಕೋದ್ಯಮದ ಮೂಲಕ ಜನರಲ್ಲಿ ಗ್ರಾಮ ಸ್ವರಾಜ್ಯ, ರಾಜಕೀಯ ಪ್ರಜ್ಞೆ, ಶಿಕ್ಷಣ, ಸಾಹಿತ್ಯ ಮತ್ತು ಆಧುನಿಕತೆಯ ಕುರಿತು ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ಸಾವಿರಾರು ಜನಜಾಗೃತಿ ಬರಹಗಳು ಹಾಗೂ ಭಾಷಣಗಳ ಮೂಲಕ ಕರಾವಳಿ ಭಾಗದ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಬಲವಂತದ ಬಂದ್‌ಗಳ ವಿರುದ್ಧ ಜನಜಾಗೃತಿ ಮೂಡಿಸಿರುವ ಅವರು, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧವೂ ಆಂದೋಲನ ನಡೆಸಿದ್ದಾರೆ. ಯುವಜನಾಂಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುವುದರ ಜೊತೆಗೆ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಹಲವು ಪತ್ರಕರ್ತರನ್ನು ರೂಪಿಸುವ ಮಹತ್ವದ ಕಾರ್ಯ ಮಾಡಿದ್ದಾರೆ.











































ಗಾಂಧೀಜಿಯವರ ಆಶಯಗಳಿಗೆ ಪೂರಕವಾದ ಜನಜಾಗೃತಿ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿರುವ ಡಾ. ಶಿವಾನಂದ ಅವರು 76ನೇ ವಯಸ್ಸಿನಲ್ಲಿಯೂ ತಮ್ಮ ಹೋರಾಟದ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಈ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಸಮಿತಿ ಸರ್ವಾನುಮತದಿಂದ ಡಾ. ಯು.ಪಿ. ಶಿವಾನಂದ ಅವರನ್ನು ಈ ಬಾರಿಯ ಗಾಂಧಿ ಸ್ಮೃತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪ್ರದಾನ:
ರೂ.10,000 ನಗದು, ಖಾದಿ ಶಾಲು, ಖಾದಿ ಹಾರ, ಗಾಂಧಿ ಟೊಪ್ಪಿ, ಪ್ರಶಸ್ತಿ ಫಲಕ ಹಾಗೂ ಫಲಪುಷ್ಪ ಕಾಣಿಕೆಯನ್ನು ಒಳಗೊಂಡ ಪ್ರಶಸ್ತಿಯನ್ನು ಅಕ್ಟೋಬರ್ 2ರಂದು ಅಪರಾಹ್ನ ಸುಳ್ಯದ ರಂಗಮಯೂರಿಯಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ಇದಕ್ಕೂ ಮುನ್ನ ಸುಳ್ಯದ ಗಾಂಧಿನಗರದಲ್ಲಿ ಗಾಂಧಿ ಚಿಂತನ ವೇದಿಕೆಯ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಮಹಾತ್ಮ ಗಾಂಧಿ ಪ್ರತಿಮೆಯ ಬಳಿಯಿಂದ ರಂಗಮಯೂರಿವರೆಗೆ ಗಾಂಧಿ ನಡಿಗೆ ನಡೆಯಲಿದೆ.
ವೇದಿಕೆಯ ನಿಯಮದಂತೆ ನಡೆಯುವ ಸರಳ ಸಮಾರಂಭದಲ್ಲಿ ಕಳೆದ ಸಾಲಿನ ಗಾಂಧಿ ಸ್ಮೃತಿ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಅವರು ಡಾ. ಯು.ಪಿ. ಶಿವಾನಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವೇದಿಕೆಯ ಸ್ಥಾಪಕ ಸಂಚಾಲಕರೂ ಆಗಿರುವ ಡಾ. ಸುಂದರ ಕೇನಾಜೆ ಅವರು ಗಾಂಧಿ ಚಿಂತನ ನಡೆಸಿಕೊಡಲಿದ್ದಾರೆ.

ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಾಫ ಸೇರಿದಂತೆ ತಾಲೂಕಿನ ಹಲವು ಪ್ರಮುಖರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಚಂದ್ರಶೇಖರ ಪೇರಾಲು, ಶಂಕರ ಪೆರಾಜೆ, ಚಂದ್ರಾವತಿ ಬಡ್ಡಡ್ಕ ಹಾಗೂ ದುರ್ಗಾಕುಮಾರ್ ನಾಯರ್‌ಕೆರೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top