ಸುಳ್ಯ: ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲ್ಯ ಗಳನ್ನು ಕಲಿಸುವುದು ಅತ್ಯಗತ್ಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಬೆಳೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ನಡೆದ ಮೂರು ದಿನಗಳ ‘ಸಂಕಲ್ಪ ಮಕ್ಕಳ ಹಬ್ಬ’ ಸುಂದರ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯಪಟ್ಟರು.
ರಂಗ ಮಯೂರಿ ಕಲಾ ಶಾಲೆ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸುಳ್ಯದ ಅಮರ ಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆದ ‘ಸಂಕಲ್ಪ ಮಕ್ಕಳ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯಪುಸ್ತಕದ ಜ್ಞಾನವೊಂದೇ ಸಾಕಾಗುವುದಿಲ್ಲ. ಉತ್ತಮ ಸಂಸ್ಕಾರ, ನೈತಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ಸೃಜನಶೀಲ ಚಟುವಟಿಕೆಗಳೂ ಅಗತ್ಯವಾಗಿವೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತವೆ. ಮೂರು ದಿನಗಳ ಕಾಲ ನಡೆದ ಮಕ್ಕಳ ಹಬ್ಬವು ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಪ್ರೋತ್ಸಾಹ ನೀಡುವ ಮಹತ್ವದ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದ ಸಂಚಾಲಕ ಜಿ.ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿತ್ಯಾನಂದ ಮುಂಡೋಡಿ, ಗಣೇಶ್ ಕೋಡಿಬೈಲು ಹಾಗೂ ವಿದ್ಯಾರ್ಥಿ ನಾಯಕರಾದ ಕೌಶಿಕ್ ಮತ್ತು ಮೋನಿಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೋಕೇಶ್ ಊರುಬೈಲ್ ವರದಿ ವಾಚಿಸಿದರು. ಯಶ್ವಿತ್ ಕಾಳಮನೆ ಸ್ವಾಗತಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಿಶ್ಮಿತಾ ಬಳ್ಳಡ್ಕ,ಭಾನವಿ ಪೈಲೂರು ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ನಿರ್ವಹಿಸಿದರು.ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ರಂಜಿತ್ ಅಡ್ತಲೆ ವಂದಿಸಿದರು.
ಮಕ್ಕಳ ಪ್ರತಿಭೆ, ಸಂಸ್ಕಾರಕ್ಕೆ ವೇದಿಕೆಯಾದ ಸಂಕಲ್ಪ ಮಕ್ಕಳ ಹಬ್ಬ ಅರ್ಥಪೂರ್ಣ ಕಾರ್ಯಕ್ರಮ: ಭಾಗೀರಥಿ ಮುರುಳ್ಯ













