ಅಜ್ಜಾವರ: ಜೀವನದಲ್ಲಿ ಗುರು ಮತ್ತು ಗುರಿ ಬಹಳ ಮುಖ್ಯ. ಗುರಿಯಿಲ್ಲದೆ ಸಾಧನೆ ಮಾಡಲು ಅಸಾಧ್ಯ. ಜೀವನದಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಗುರುವಿನ ಪಾತ್ರ ಮಹತ್ವದ್ದಾಗಿದೆ ಎಂದು ನ್ಯಾಯವಾದಿ ಸವಿತಾ ಹೇಳಿದರು.
ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಪುಸ್ತಕ ಬಿಡುಗಡೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದರು ಅದ್ಭುತ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದಾರೆ. ಯಾವುದೇ ಪ್ರತಿಫಲವನ್ನು ಬಯಸದೆ ಸಮಾಜಕ್ಕೆ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಮಾದರಿಯಾಗಿದೆ ಎಂದು ಸವಿತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾಮೀಜಿಯವರ ‘ಮಾತೆಗಿಂತ ಮಿಗಿಲಾದ ದೇವರಿಲ್ಲ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಎಎಸ್ಐ ದೇವಯ್ಯ ಗೌಡ, ಈ ಸ್ಥಳವು ಇಂದು ಅಪೂರ್ವವಾದ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ಇದು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಬೇಕಾಗಿದೆ. ಸ್ವಾಮೀಜಿಯವರು ಸಲ್ಲಿಸುತ್ತಿರುವ ಸೇವೆ ಸ್ಮರಣೀಯವಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಸ್ವಾಮೀಜಿಯವರು ಮಾತನಾಡಿದರು.
ಅಜ್ಜಾವರ ಕರ್ಲಪ್ಪಾಡಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನವರಾತ್ರಿ ಉತ್ಸವದ ಅಂಗವಾಗಿ ಬೆಳಿಗ್ಗೆ 9 ಗಂಟೆಯಿಂದ ಗಣಹೋಮ, ದುರ್ಗಾಪೂಜೆ ಹಾಗೂ ಭಜನಾ ಸತ್ಸಂಗ ನಡೆಯಿತು. ಮಧ್ಯಾಹ್ನ ಮಹಾಪೂಜೆ ನೆರವೇರಿದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶಿಕ್ಷಕಿ ಸುನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಇಬ್ಬರು ವಿದ್ಯಾರ್ಥಿಗಳಿಗೆ ಸ್ವಾಮೀಜಿಯರು ಮಂತ್ರೋಪದೇಶ ಬೋಧಿಸಿದರು.
ಗುರುವಿಲ್ಲದೆ ಜೀವನದಲ್ಲಿ ಗುರಿ ಇಲ್ಲ: ನ್ಯಾಯವಾದಿ ಸವಿತಾ












