ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಆಧ್ಯಾತ್ಮಿಕ ಸಂಭ್ರಮದೊಂದಿಗೆ ನಡೆಯುತ್ತಿದೆ. ಅ.11ರಂದು ಆರಂಭಗೊಂಡಿರುವ ನವರಾತ್ರಿ ಪೂಜಾ ಕಾರ್ಯಕ್ರಮಗಳು ಅ.20ರವರೆಗೆ ಮುಂದುವರಿಯಲಿವೆ.
ಅ.16ರಂದು ಪಂಜ ವನಿತಾ ಸಮಾಜದ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತಿಗೀತೆಗಳ ಮಧುರ ನಿನಾದ ಹಾಗೂ ದೇವಿಯ ನಾಮಸ್ಮರಣೆಯಿಂದ ದೇವಾಲಯದ ಪರಿಸರ ಭಕ್ತಿಮಯವಾಯಿತು. ನಾಗತೀರ್ಥದ ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡದ ವತಿಯಿಂದ ನಡೆದ ಕುಣಿತ ಭಜನೆಯು ಭಕ್ತರ ಗಮನ ಸೆಳೆಯಿತು. ಮಕ್ಕಳ ಭಕ್ತಿಪೂರ್ಣ ಹೆಜ್ಜೆಗಳು ಹಾಗೂ ಲಯಬದ್ಧ ಕುಣಿತವು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತು.
ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಹಾಪೂಜೆ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಭಕ್ತರು ದೇವಿಯ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅ.17ರಂದು ಭಜನೆ ಮತ್ತು ಭರತನಾಟ್ಯ
ನವರಾತ್ರಿ ಮಹೋತ್ಸವದ ಅಂಗವಾಗಿ ಅ.17ರಂದು ಶಿವಳ್ಳಿ ಸಂಪದ ಪಂಜ ವಲಯದ ವತಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬಳಿಕ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಅವರ ಶಿಷ್ಯ ಮಾಸ್ಟರ್ ತನ್ಮಯ್ ಕಿನ್ನಿಕುಮ್ಮಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಪಂಜ ದೇವಸ್ಥಾನದಲ್ಲಿ ಭಕ್ತಿಭಾವದ ನವರಾತ್ರಿ ಸಂಭ್ರಮ: ಭಜನಾ ಸಂಕೀರ್ತನೆ, ಕುಣಿತ ಭಜನೆಯಿಂದ ಆಧ್ಯಾತ್ಮಿಕ ಮೆರಗು













