ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯುತ್ತಿದ್ದು, ಅ.11ರಂದು ಆರಂಭಗೊಂಡಿರುವ ಪೂಜಾ ಕಾರ್ಯಕ್ರಮಗಳು ಅ.20ರವರೆಗೆ ಮುಂದುವರಿಯಲಿವೆ.
ಅ.17ರಂದು ಶಿವಳ್ಳಿ ಸಂಪದ ಪಂಜ ವಲಯದ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತಿಗೀತೆಗಳ ಮಧುರ ಗಾಯನವು ದೇವಿಯ ಸನ್ನಿಧಿಯಲ್ಲಿ ಭಕ್ತಿಭಾವವನ್ನು ಇಮ್ಮಡಿಗೊಳಿಸಿತು. ಬಳಿಕ ಮಾಸ್ಟರ್ ತನ್ಮಯ್ ಕಿನ್ನಿಕುಮ್ಮಿ ಅವರು ಭರತನಾಟ್ಯ ಪ್ರದರ್ಶನ ನೀಡಿ ಕಲಾ ಸೊಬಗನ್ನು ಮೆರೆದರು. ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಅವರ ಶಿಷ್ಯರಾಗಿರುವ ತನ್ಮಯ್ ಅವರ ನೃತ್ಯ ಪ್ರದರ್ಶನವು ನೆರೆದಿದ್ದ ಭಕ್ತರ ಗಮನ ಸೆಳೆಯಿತು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಭಕ್ತರು ದೇವಿಯ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗೌರವ ಸಲಹೆಗಾರರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಅ.18 ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ,ಕಲಾಕ್ಷೇತ್ರ ಪಂಜ ಇವರಿಂದ ನಾಟ್ಯ ವೈಭವ ನಡೆಯಲಿದೆ.













