ಕಡಬ : ಸ್ನೇಹಿತನ ಜೀವ ಉಳಿಸಲು ಹೋಗಿ ನರ್ಸಿಂಗ್ ವಿದ್ಯಾರ್ಥಿ ಸಾವು

ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಮುಂದಾದ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ತಾವೇ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ನಿಡ್ಲೆ ಗ್ರಾಮದ ಪಾರ್ಪಿಕಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ಗೌಡ ಅವರ ಪುತ್ರ ಕೀರ್ತನ್ ಗೌಡ (20) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಕೀರ್ತನ್, ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ ಕೀರ್ತನ್ ಗೌಡ ಅವರು ಐವರು ಸ್ನೇಹಿತರೊಂದಿಗೆ ಪಾರ್ಪಿಕಲ್ ನದಿಗೆ ಸ್ನಾನ ಮಾಡಲು ತೆರಳಿದ್ದರು. ಸ್ನಾನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರಲ್ಲೊಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಕೀರ್ತನ್, ತಡಮಾಡದೆ ಅವರನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ಆದರೆ, ಸ್ನೇಹಿತನನ್ನು ರಕ್ಷಿಸುವ ಪ್ರಯತ್ನದ ನಡುವೆ ಕೀರ್ತನ್ ಅವರೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನದಿಯ ಬಳಿ ಧಾವಿಸಿ, ನೀರಿನಲ್ಲಿ ಮುಳುಗಿದ್ದ ಕೀರ್ತನ್ ಅವರ ಮೃತದೇಹವನ್ನು ಮೇಲಕ್ಕೆತ್ತಿದರು. ಬಳಿಕ ಅವರನ್ನು ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ನಂತರ ಪುತ್ತೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಯುವ ವಯಸ್ಸಿನಲ್ಲೇ ಸ್ನೇಹಿತನ ಜೀವ ಉಳಿಸಲು ಮುಂದಾಗಿ ಕೀರ್ತನ್ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರ ವಲಯದಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.
ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top