ಸುಳ್ಯ: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹಾಲುಮಡ್ಡಿ ಸಂಗ್ರಹಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು 4 ಕೆ.ಜಿ. ಹಾಲುಮಡ್ಡಿಯನ್ನು ಜಪ್ತಿ ಮಾಡಿದೆ. ನವೆಂಬರ್ 4ರಂದು ಬಿಳಿನೆಲೆ ಗ್ರಾಮದ ಸುಬ್ರಹ್ಮಣ್ಯ ಅರಣ್ಯ ವಲಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.ಮೀಸಲು ಅರಣ್ಯದೊಳಗೆ ಬೆಳಗ್ಗೆ ಸುಮಾರು 8.30ರ ವೇಳೆಗೆ ಹಾಲುಮಡ್ಡಿ ಸಂಗ್ರಹಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸುಳ್ಯ ಎಸಿಎಫ್ ಪ್ರಶಾಂತ್ ಪೈ ಅವರ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು.ಈ ವೇಳೆ ಹಾಲುಮಡ್ಡಿ ಸಂಗ್ರಹದಲ್ಲಿ ತೊಡಗಿದ್ದ ಮಂಜುನಾಥ್ ಕೊಕ್ಕಡ ಎಂಬಾತನನ್ನು ವಶಕ್ಕೆ ಪಡೆಯಲಾಯಿತು. ಆತನಿಂದ ಸಂಗ್ರಹಿಸಲಾಗಿದ್ದ ಸುಮಾರು 4 ಕೆ.ಜಿ. ಹಾಲುಮಡ್ಡಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ವಿಚಾರಣೆ ವೇಳೆ ಸತೀಶ್ ಎಂಬವರು ತಮ್ಮನ್ನು ಹಾಲುಮಡ್ಡಿ ಸಂಗ್ರಹಿಸಲು ಕಳುಹಿಸಿದ್ದರು ಎಂದು ಮಂಜುನಾಥ್ ತಿಳಿಸಿದ್ದಾನೆ ಎನ್ನಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಾಜು ಮತ್ತು ಉದಯ ಎಂಬವರು ಅರಣ್ಯಾಧಿಕಾರಿಗಳನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮುಂದಿನ ತನಿಖೆ ಕೈಗೊಂಡಿದೆ.
ಮೀಸಲು ಅರಣ್ಯದಲ್ಲಿ ಹಾಲುಮಡ್ಡಿ ಸಂಗ್ರಹ: ಓರ್ವನ ವಶಕ್ಕೆ, 4 ಕೆ.ಜಿ. ಹಾಲುಮಡ್ಡಿ ಜಪ್ತಿ

















