ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿರುವ ಪ್ರಮುಖ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಕೋರಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಿಗೆ ₹25 ಕೋಟಿ ಅನುದಾನ ಒದಗಿಸುವಂತೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದ್ದಾರೆ.
ಕ್ಷೇತ್ರದ ಗ್ರಾಮೀಣ ಭಾಗಗಳ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಒಟ್ಟು ಎಂಟು ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಗುರುತಿಸಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಸ್ತಾವಿತ ಕಾಮಗಾರಿಗಳು:
ಸುಳ್ಯ ತಾಲೂಕಿನ ರಾಜ್ಯ ಹೆದ್ದಾರಿ 276ರ 13.80ರಿಂದ 14.80 ಕಿ.ಮೀ.ವರೆಗಿನ ಒಂದು ಕಿ.ಮೀ. ರಸ್ತೆ ಅಭಿವೃದ್ಧಿಗೆ ₹3 ಕೋಟಿ ಹಾಗೂ ಕಡಬ ತಾಲೂಕಿನ ರಾಜ್ಯ ಹೆದ್ದಾರಿ 100ರ 14.70ರಿಂದ 14.90 ಕಿ.ಮೀ.ವರೆಗಿನ 200 ಮೀಟರ್ ರಸ್ತೆ ಅಭಿವೃದ್ಧಿಗೆ ₹4 ಕೋಟಿ ಅನುದಾನ ಕೋರಲಾಗಿದೆ.
ಜಿಲ್ಲಾ ಮುಖ್ಯ ರಸ್ತೆ ಕಾಮಗಾರಿಗಳ ಪೈಕಿ ಎಲಿಮಲೆ–ಅರಂತೋಡು ರಸ್ತೆಯ 6ರಿಂದ 10 ಕಿ.ಮೀ.ವರೆಗಿನ ರಸ್ತೆ ಅಭಿವೃದ್ಧಿಗೆ ₹4.50 ಕೋಟಿ, ಅಯ್ಯನಕಟ್ಟೆ ಭಾಗದ 4ರಿಂದ 9 ಕಿ.ಮೀ.ವರೆಗಿನ ರಸ್ತೆ ಅಭಿವೃದ್ಧಿಗೆ ₹4.50 ಕೋಟಿ ಹಾಗೂ ಜೈವ…–ಮಂಡೆಕೋಲು ರಸ್ತೆಯ 6.50ರಿಂದ 10 ಕಿ.ಮೀ.ವರೆಗಿನ ಮರುಡಾಂಬರೀಕರಣಕ್ಕೆ ₹2 ಕೋಟಿ ಪ್ರಸ್ತಾಪಿಸಲಾಗಿದೆ.
ಇದಲ್ಲದೆ, ಕಡಬ ತಾಲೂಕಿನ ಸುಬ್ರಹ್ಮಣ್ಯ–ಉಪ್ಪಿನಂಗಡಿ ರಸ್ತೆಯ 29.50ರಿಂದ 31.50 ಕಿ.ಮೀ.ವರೆಗಿನ ರಸ್ತೆ ಕಾಂಕ್ರೀಟೀಕರಣ ಮತ್ತು ಅಭಿವೃದ್ಧಿಗೆ ₹2 ಕೋಟಿ, ಪೆರ್ವಾಜೆ ಭಾಗದ 29ರಿಂದ 31 ಕಿ.ಮೀ.ವರೆಗಿನ ರಸ್ತೆ ಅಗಲೀಕರಣಕ್ಕೆ ₹2 ಕೋಟಿ ಹಾಗೂ ನೆಲ್ಯಾಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 75 ಮತ್ತು ರಾಜ್ಯ ಹೆದ್ದಾರಿ 113 ಸಂಪರ್ಕಿಸುವ ರಸ್ತೆಯ 8.45ರಿಂದ 10 ಕಿ.ಮೀ.ವರೆಗಿನ ರಸ್ತೆ ಅಗಲೀಕರಣಕ್ಕೆ ₹3 ಕೋಟಿ ಅನುದಾನ ಕೋರಲಾಗಿದೆ.
ಒಟ್ಟು ಎಂಟು ಕಾಮಗಾರಿಗಳಿಗೆ ₹2,500 ಲಕ್ಷ ಅಂದರೆ ₹25 ಕೋಟಿ ಅನುದಾನ ಒದಗಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಕ್ಷೇತ್ರದ ಪ್ರಮುಖ ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅನುದಾನ ಮಂಜೂರು ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಲಾಗಿದೆ.
ಸುಳ್ಯ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹25 ಕೋಟಿ ಅನುದಾನ ಕೋರಿ ಸಚಿವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ






































