ಸುಳ್ಯ: ಸುಳ್ಯ ತಾಲೂಕಿನ ಅಲೆಟ್ಟೆ ಗ್ರಾಮದ ವಾರ್ಡ್ ನಂ. 7ರ ವ್ಯಾಪ್ತಿಯಲ್ಲಿರುವ ಮಜಿಗುಂಡಿ ರಸ್ತೆ ಹಾಗೂ ಕುಕ್ಕುಂಬಳ ಸೇತುವೆಯ ದುರಸ್ತಿ ಕಾರ್ಯಕ್ಕೆ ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಈವರೆಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮತ್ತು ಸೇತುವೆಯ ದುರಸ್ತಿಗಾಗಿ ಶಾಸಕರು, ಗ್ರಾಮದ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರ ಗಮನಕ್ಕೆ ಹಲವು ಬಾರಿ ತಂದಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಜನರ ಮೂಲಭೂತ ಬೇಡಿಕೆಗೆ ಸ್ಪಂದನೆ ದೊರೆಯದಿರುವುದು ಈ ಭಾಗದ ನಿವಾಸಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಆಲೆಟ್ಟಿ ಗ್ರಾಮದ ವಾರ್ಡ್ ನಂ. 7ರ ವ್ಯಾಪ್ತಿಯ ಜನರು ನಿರ್ಧರಿಸಿದ್ದಾರೆ. ರಸ್ತೆ ಮತ್ತು ಸೇತುವೆಯ ದುರಸ್ತಿ ಕಾರ್ಯ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಚುನಾವಣೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.








































