ಸುಳ್ಯ, ನ.20 : ಅಭಿವೃದ್ಧಿಯ ದೂರದೃಷ್ಟಿಯೂ ಇಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದ್ಧತೆಯೂ ಇಲ್ಲದ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆದು 2028ರಲ್ಲಿ ಬಿಜೆಪಿಯನ್ನು ಮತ್ತೆ ಆಡಳಿತದ ಗದ್ದುಗೆಗೆ ತರುವ ಮೂಲಕ ರಾಜ್ಯದಲ್ಲಿ ಹೊಸ ಆಡಳಿತಕ್ಕೆ ನಾಂದಿ ಹಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ವಿಕಾಸ್ ಪುತ್ತೂರು ಗುಡುಗಿದರು.
ಬಿಜೆಪಿ ಸುಳ್ಯ ಮಂಡಲ ಹಾಗೂ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಂಡ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆಯ ಬಳಿಕ ನ.20ರಂದು ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ ನಡೆದ ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಪಂಚ ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರಕಾರ, ಇದೀಗ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರದಿಂದ ಹಿಡಿದು ಅಗತ್ಯ ವಸ್ತುಗಳ ಬೆಲೆಯವರೆಗೆ ಪದೇಪದೆ ಏರಿಕೆ ಮಾಡುವ ಮೂಲಕ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಲೂ ಸರಕಾರಕ್ಕೆ ಧೈರ್ಯವಿಲ್ಲ. ಸರಕಾರಿ ಕಚೇರಿಗಳ ಖಾಯಂ ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರಿಗೆ ಸಕಾಲದಲ್ಲಿ ವೇತನ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ₹32 ಸಾವಿರ ಕೋಟಿ ಅನುದಾನದ ಘೋಷಣೆ ಮಾಡಿದ ಬೆನ್ನಲ್ಲೇ ಸರಕಾರದ ಹಣಕಾಸು ಇಲಾಖೆಯಿಂದ ಹಣಕಾಸಿನ ಸ್ಥಿತಿಗತಿ ಕುರಿತು ಸುತ್ತೋಲೆ ಹೊರಬಂದಿದೆ. ಎಲ್ಲೆಂದರಲ್ಲಿ ಮನಬಂದಂತೆ ಅನುದಾನ ಘೋಷಿಸಬಾರದು ಎಂಬ ಸೂಚನೆ ನೀಡಲಾಗಿದೆ. ಒಂದು ಕಡೆ ಕೋಟ್ಯಂತರ ರೂಪಾಯಿಗಳ ಘೋಷಣೆ, ಇನ್ನೊಂದು ಕಡೆ ಹಣಕಾಸಿನ ಕೊರತೆಯ ನೆಪ – ಇದು ಕಾಂಗ್ರೆಸ್ ಆಡಳಿತದ ವೈರುಧ್ಯ ಎಂದು ಟೀಕಿಸಿದರು.
ಮೂರೂವರೆ ವರ್ಷಗಳ ಆಡಳಿತದಲ್ಲಿ ಶೇ.30ರಷ್ಟು ಪಿಂಚಣಿದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಪಿಎಲ್ ಪಡಿತರ ಚೀಟಿಗಳ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ವಿಕಲಚೇತನರಿಗೆ ಸಲ್ಲಬೇಕಾದ ಮಾಸಾಶನವೂ ತಲುಪುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆ ರಾಜ್ಯದ ಮೇಲೆ ₹8.5 ಲಕ್ಷ ಕೋಟಿಯಷ್ಟು ಸಾಲದ ಹೊರೆ ಬಿದ್ದಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರ ಬದುಕು ಅಸ್ತವ್ಯಸ್ತಗೊಂಡಿದೆ. ಮೂರೂವರೆ ವರ್ಷಗಳಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡದ ಸರಕಾರ ಎಂಬ ಆರೋಪ ಎದುರಿಸುತ್ತಿದೆ. ಪೊಲೀಸ್ ಸಿಬ್ಬಂದಿಯ ಟೋಪಿ ಬಣ್ಣ ಬದಲಾವಣೆಯ ವಿಚಾರದಲ್ಲೂ ಕಮಿಷನ್ ದಂಧೆ ನಡೆದಿದೆ ಎಂಬ ಅನುಮಾನವಿದೆ. ಪೊಲೀಸರ ಮೇಲಿನ ಕಾಳಜಿಗಿಂತ ಕಮಿಷನ್ ಪಡೆಯುವ ಉದ್ದೇಶವೇ ಇದರ ಹಿಂದಿದೆ ಎಂದು ಆರೋಪಿಸಿದರು.
ಉಚಿತ ವಿದ್ಯುತ್ ನೀಡುವ ಹೆಸರಿನಲ್ಲಿ ಕನಿಷ್ಠ ವಿದ್ಯುತ್ ಶುಲ್ಕವನ್ನು ದುಪ್ಪಟ್ಟುಗೊಳಿಸಿ ಜನರ ಜೇಬಿಗೆ ಕತ್ತರಿ ಹಾಕಲಾಗಿದೆ. ಒಂದು ಕೈಯಲ್ಲಿ ಉಚಿತದ ಭರವಸೆ ನೀಡಿ ಮತ್ತೊಂದು ಕೈಯಲ್ಲಿ ಹೆಚ್ಚುವರಿ ಹೊರೆ ಹೇರುವ ಸರಕಾರದ ನೀತಿಗಳ ವಿರುದ್ಧ ಜನಾಂದೋಲನ ಅನಿವಾರ್ಯವಾಗಿದೆ. ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಹೋರಾಟಕ್ಕೆ ಜನತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದರು. ಬಳಿಕ ನಗರ ಪಂಚಾಯತ್ ಮುಂಭಾಗದಲ್ಲಿ ಸಮಾವೇಶಗೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಕ್ಕೊತ್ತಾಯ ಸಭೆ ನಡೆಸಿದರು.
ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ., ಪ್ರಧಾನ ಕಾರ್ಯದರ್ಶಿ ನಾರಾಯಣ, ಎ.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗದೀಶ ಜಯನಗರ, ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಉಮೇಶ್ ಪಿ.ಕೆ., ಶಶಿಕಲಾ ನೀರಬಿದಿರೆ, ಶೀನಪ್ಪ ಬಯಂಬು, ದಯಾನಂದ ಕೇರ್ಪಳ, ರಾಧಾಕೃಷ್ಣ ರೈ ಬೂಡು, ಸುನಿಲ್ ಕೇರ್ಪಳ, ಅಶೋಕ್ ಅಡ್ಕಾರ್, ಕೇಶವ ಮಾಸ್ತರ್, ಶೀಲಾವತಿ ಕುರುಂಜಿ, ಸುಧಾಕರ, ರಂಜಿತ್ ಪೂಜಾರಿ, ರಮೇಶ್ ಇರಂತಮಜಲು, ಶಿಲ್ಪಾ ಸುದೇವ್, ಸೋಮನಾಥ ಪೂಜಾರಿ, ಬಾಲಗೋಪಾಲ ಸೇರ್ಕಜೆ, ಮಾಧವ ರಾವ್, ಚಿದಾನಂದ ವಿದ್ಯಾನಗರ, ಬುದ್ಧ ನಾಯ್ಕ, ರಂಜಿತ್ ಜಯನಗರ, ಹರೀಶ್ ಬೂಡುಪನ್ಮೆ, ಶಿವರಾಮ ಕೇರ್ಪಳ, ರಂಜಿತ್ ಎನ್.ಆರ್., ಪ್ರಶಾಂತ್ ಕಾರ್ಯರತೋಡಿ, ಕಿಶೋರಿ ಶೇಟ್, ಚಂದ್ರಶೇಖರ ಕೇರ್ಪಳ, ಸಿಂಧೂರ ಶೇಟ್, ಬಾಲಮುರಳಿ ಕುದ್ಪಾಜೆ, ಶೀನಪ್ಪ ಗೌಡ ಪಡ್ರೆ, ಸುಮತಿ ಜಯನಗರ, ವೇದಾವತಿ, ನವ್ಯ ಚಂದ್ರಶೇಖರ, ಪೂರ್ಣಿಮಾ ಹಳೆಗೇಟ್, ಆರತಿ ಪುರುಷೋತ್ತಮ, ಚಿದಾನಂದ ಕುದ್ಪಾಜೆ ಜಿನ್ನಪ್ಪ ಪೂಜಾರಿ, ಹೇಮಂತ್ ಕಂದಡ್ಕ ಮತ್ತಿತರರು ಭಾಗವಹಿಸಿದ್ದರು.








































