ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸುಳ್ಯದ ಎಂ.ಬಿ. ಫೌಂಡೇಶನ್ನ ಸಾಂದೀಪ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷವಾಗಿ ಸೇವಾದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ, “ಪೂಜ್ಯ ಖಾವಂದರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮೌನ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಸರಕಾರಿ ಸಂಸ್ಥೆಗಳು ಹಾಗೂ ಇತರ ಸಂಘ-ಸಂಸ್ಥೆಗಳಿಗೂ ಮಾದರಿಯಾಗುವ ರೀತಿಯಲ್ಲಿ ಸಾಮಾಜಿಕ, ಆರ್ಥಿಕ ಸಬಲೀಕರಣ, ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಮಾಜದ ವಿವಿಧ ವರ್ಗಗಳ ಏಳಿಗೆಗಾಗಿ ಅವರು ಸಲ್ಲಿಸುತ್ತಿರುವ ಕೊಡುಗೆ ಅಪಾರವಾದುದು” ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಪೂಜ್ಯರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಸುಳ್ಯ ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ ಉದ್ಘಾಟಿಸಿದರು. ಯೋಜನಾಧಿಕಾರಿ ಮಾಧವ ಗೌಡ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೂಜ್ಯರ ಜನ್ಮದಿನದ ಅಂಗವಾಗಿ ಶಾಲೆಯ 46 ವಿಶೇಷಚೇತನ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಳ್ಯ ತಾಲೂಕು ಜನಜಾಗೃತಿ ಸದಸ್ಯ ಸುಬ್ಬ ಪಾಟಾಳಿ ಹಾಗೂ ನವಜೀವನ ಸಮಿತಿ ಸದಸ್ಯ ಸುಬ್ಬಯ್ಯ ನಾಯ್ಕ ಸಿಹಿತಿಂಡಿ ವಿತರಿಸುವ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಜನಜಾಗೃತಿ ಸದಸ್ಯರಾದ ಬೂಡು ರಾಧಾಕೃಷ್ಣ ರೈ, ಪದ್ಮನಾಭ ಜೈನ್, ಒಕ್ಕೂಟ ವಲಯಾಧ್ಯಕ್ಷ ಮನೋಹರ್, ಜನಜಾಗೃತಿ ವಲಯಾಧ್ಯಕ್ಷ ವಿಜಯಕುಮಾರ್ ಉಬರಡ್ಕ, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಸಾಂದೀಪ ವಿಶೇಷ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಣಿ ಸದಾಶಿವ, ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಳ್ಯ ವಲಯ ಮೇಲ್ವಿಚಾರಕ ದಿನೇಶ್ ವಂದಿಸಿದರು.








































