ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರದಿಂದ HPV ಲಸಿಕೆ ಅಭಿಯಾನ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯದ ಶ್ರೀರಕ್ಷೆಗೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಉಚಿತ ಹೆಚ್.ಪಿ.ವಿ. ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಶೇಷ ಕರೆ ನೀಡಿದ್ದಾರೆ.





















































































ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದರು, ನಮ್ಮ ಜಿಲ್ಲೆಯ 14ರಿಂದ 15 ವರ್ಷದೊಳಗಿನ ಎಲ್ಲಾ ಕಿಶೋರಿಯರು ಸ್ವಯಂಪ್ರೇರಿತರಾಗಿ ಈ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ‘ಆರೋಗ್ಯವಂತ ಭಾರತ – ಆರೋಗ್ಯವಂತ ದಕ್ಷಿಣ ಕನ್ನಡ’ ನಿರ್ಮಾಣಕ್ಕೆ ಸಹಕರಿಸಬೇಕು. ವಿಶೇಷವಾಗಿ ಹೆಣ್ಣುಮಕ್ಕಳ ತಾಯಂದಿರಲ್ಲಿ ವಿನಂತಿಸಿರುವ ಅವರು, ಶಾಲಾ ಪರೀಕ್ಷೆಗಳು ಮುಗಿದ ತಕ್ಷಣ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಮಕ್ಕಳಿಗೆ ಈ ಹೆಚ್.ಪಿ.ವಿ. ಲಸಿಕೆಯನ್ನು ಕೊಡಿಸುವಂತೆ ಕೋರಿದ್ದಾರೆ.

ದ.ಕ. ಜಿಲ್ಲೆಯಲ್ಲಿ 22,473 ಕಿಶೋರಿಯರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದ್ದು, ಈಗಾಗಲೇ ರಾಜ್ಯಕ್ಕೆ 2.54 ಲಕ್ಷ ಡೋಸ್ ಎಚ್‌ಪಿವಿ ಲಸಿಕೆ ಉಚಿತವಾಗಿ ಸರಬರಾಜಾಗಿದೆ.  ಖಾಸಗಿ ಆಸ್ಪತ್ರೆಯಲ್ಲಿ ಈ ಲಸಿಕೆಗೆ ಗರಿಷ್ಟ ೮೦೦೦ ರೂ.ವರೆಗೆ ದರ ಇದ್ದು, ಆದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ನಡಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್.ಪಿ.ವಿ. ಲಸಿಕೆಯು  ಪಡೆದುಕೊಳ್ಳಬಹುದು. ಮುಂದಿನ ಮೂರು ತಿಂಗಳು ಅಂದರೆ ಮೇ ತಿಂಗಳಾಂತ್ಯದವರೆಗೆ ಈ ಲಸಿಕೀಕರಣ ಅಭಿಯಾನ ಮುಂದುವರಿಯಲಿದೆ. ಈ ಅಭಿಯಾನವು ಹದಿಹರೆಯದ ಬಾಲಕಿಯರ ಭವಿಷ್ಯದ ಜೀವನ ಸುರಕ್ಷಿತಗೊಳಿಸುವ ದೃಷ್ಟಿಯಿಂದ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬ ಅರ್ಹ ಹೆಣ್ಣುಮಗುವಿಗೂ ಈ ಲಸಿಕೆ ತಲುಪುವಂತೆ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಸಿಕೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಪೋಷಕರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಇಲಾಖೆಯು ಇದನ್ನು ಆಂದೋಲನದಂತೆ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯ ಜನಪ್ರತಿನಿಧಿಯಾಗಿ ಈ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿರಲಿದೆ ಎಂದು ಸಂಸದ ಕ್ಯಾ. ಚೌಟ ತಿಳಿಸಿದ್ದಾರೆ.

*U-WIN ಪ್ಲಾಟ್‌ಫಾರ್ಮ್‌ನಲ್ಲಿ ಪೂರ್ವ-ನೋಂದಣಿಗೆ ಅವಕಾಶ:*
ಫಲಾನುಭವಿಗಳು U-WIN ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೂರ್ವ-ನೋಂದಣಿ ಮಾಡಿ ಈ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅಪಾಯಿಂಟ್‌ಮೆಂಟ್‌ ನಿಗದಿಪಡಿಸಬಹುದು ಅಥವಾ ನೇರವಾಗಿ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆಯನ್ನು ಪಡೆದುಕೊಳ್ಳಬಹುದು. ಲಸಿಕೆ ಪಡೆಯಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ.

Leave a Comment

Your email address will not be published. Required fields are marked *

error: Content is protected !!
Scroll to Top