ಆರೋಹ ಫಿಲಂಸ್ ಬ್ಯಾನರ್ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿರುವ, ಮಯೂರ್ ಅಂಜಿಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶಿಸಿರುವ ‘ಭಾವ ತೀರ ಯಾನ’ ಸಿನಿಮಾ ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ಚಲನಚಿತ್ರ ಹೊರತಂದಿರುವುದು ಒಂದು ಸಾಧನೆ ಎಂದು ಎಂ.ಬಿ.ಪೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.
ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೇ.8 ರಂದು ಸುಳ್ಯದಲ್ಲಿ ಮರುತೆರೆ ಕಾಣಲಿರುವ ಭಾವತೀರ ಯಾನ ಚಲನಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಜತೆಗೆ ಮನೋಜ್ಞವಾದ ಚಲನಚಿತ್ರವಾಗಿದೆ ಎಂದರು. ಪುತ್ತೂರಿನಲ್ಲಿ ಯಶಸ್ವಿಯಾಗಿ ಹಲವು ದಿನಗಳ ಕಾಲ ತೆರೆ ಕಂಡು ಎಲ್ಲಾ ಪ್ರೇಕ್ಷಕರ ಮನ ಗೆದ್ದಿದೆ. ಇದೀಗ ಸುಳ್ಯದಲ್ಲಿ ನೂತನವಾಗಿ ಆರಂಭಗೊಂಡ ಭಾರತ್ ಸಿನೇಮಾಸ್ ನಲ್ಲಿ ಮತ್ತೊಮ್ಮೆ ತೆರೆ ಕಾಣಲಿದ್ದು, ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ. ನಮ್ಮೂರಿನ ದೃಶ್ಯಗಳನ್ನು, ಹೊಂದಿದ್ದು ನಮ್ಮೂರಿನ ಪ್ರತಿಭೆಗಳಿಗೆ ಅವಕಾಶ ಒದಗಿಸಿರುವ ಚಿತ್ರ. ಮಯೂರ ಅಂಬೆಕಲ್ಲು ಅವರು ಮನಸ್ಸಿಗೆ ಮುದ ನೀಡುವ ಸಂಗೀತ ನೀಡಿದ್ದಾರೆ ಎಂದರು.
ಚಿತ್ರ ನಿರ್ಮಾಪಕರಾದ ಶೈಲೇಶ್ ಅಂಬೆಕಲ್ಲು ಮಾತನಾಡಿ ಮೇ.8 ರಂದು ಸಂಜೆ 7 ಗಂಟೆಗೆ ಚಿತ್ರ ಮರುಪ್ರದರ್ಶನ ಸುಳ್ಯದ ಭಾರತ್ ಸಿನೇಮಾಸ್ ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಶಾಸಕರಾದ ಭಾಗೀರಥಿ ಮುರುಳ್ಯ, ಚಿತ್ರತಂಡದ ನಟ ನಟಿಯರು ಹಾಗೂ ಮತ್ತಿತರರ ಗಣ್ಯರು ಆಗಮಿಸಲಿದ್ದಾರೆ.
ಪುತ್ತೂರಿನಲ್ಲಿ ಚಿತ್ರ ಪ್ರದರ್ಶನಗೊಂಡಾಗ ಅಲ್ಲಿ ಹೋಗಿ ನೋಡಲು ಕಷ್ಟವಾದವರಿಗೆ ಇಲ್ಲಿ ಅವಕಾಶ ಮಾಡಿದ್ದೇವೆ. ಸುಳ್ಯದ ಹರಿಹರಪಲ್ಲತ್ತಡ್ಕ, ತಳೂರು, ಗಾಂಧಿನಗರ, ಕೆವಿಜಿ ಮೆಡಿಕಲ್ ಕಾಲೇಜು, ಡಾ. ರೇಣುಕಾ ಪ್ರಸಾದ್ ತೋಟದ ಮನೆ ಚಿತ್ರೀಕರಣಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ಶ್ರೀಹರಿ ಪೈಂದೋಡಿ, ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್.ಗಂಗಾಧರ, ಪಯಸ್ವಿನಿ ಜೇಸಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್, ಡಾ. ವಿದ್ಯಾ ಶಾರದೆ ಉಪಸ್ಥಿತರಿದ್ದರು.
–






























































