ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ನಿ. ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ ತಾಲೂಕು ಪಂಚಾಯತ್ ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮತ್ತು ಮಾವು ಮೇಳ ಜೂನ್ ೧೨ ರಿಂದ ೧೪ ರವರೆಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಮೇಳದ ಸಮಿತಿ ಅಧ್ಯಕ್ಷ ಹಾಗೂ ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಜೂ. ೪ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂ. ೧೨ರಂದು ಪೂರ್ವಾಹ್ನ ೧೦.೦೦ಕ್ಕೆ ಮೇಳದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟರವರು ಉದ್ಘಾಟಿಸಲಿದ್ದು, ಹಲಸು ಮಾವು ಮೇಳದ ಸಮಿತಿಯ ಗೌರವ ಅಧ್ಯಕ್ಷ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಕೆ. ಮಂಜುಳಾ ಎಂ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್., ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಹಲಸು ಮಾವು ಮೇಳದ ಗೌರವ ಮಾರ್ಗದರ್ಶಕ ಡಾ. ಯು.ಪಿ ಶಿವಾನಂದರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದೇ ಗೌಡ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಐ.ಕೆ. ದೊಡ್ಡಮನಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ ದಿನಾಂಕ ೧೪ರಂದು ಅಪರಾಹ್ನ ೫.೦೦ಕ್ಕೆ ನಡೆಯಲಿದ್ದು, . ಸಭಾ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಹಾಗೂ ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಎಒಎಲ್‌ಇ ಕಮಿಟಿ ಬಿ ಇದರ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ರಾಜ್ಯ ರೈತ ರತ್ನ ಪ್ರಶಸ್ತಿ ಪುರಸ್ಕೃತ ಅಶೋಕ ಕುಮಾರ್ ಕೆ.ಎಸ್., ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಮುಸ್ತಾಫ ಕೆ.ಎಂ., ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಉಪಸ್ಥಿತರಿರುವರು
ಹಲಸು ಮಾವು ಮೇಳದಲ್ಲಿ ಸುಮಾರು ೭೫ ಕ್ಕಿಂತಲೂ ಹೆಚ್ಚು ಸ್ಟಾಲ್‌ಗಳು ಬರಲಿದ್ದು, ವಿವಿಧ ಬಗೆಯ ಹಲಸು ಮಾವು ಇತರ ತಾಜಾ ಹಣ್ಣುಗಳ ಸ್ಟಾಲ್‌ಗಳು, ಹಲಸಿನ ಉಪ ಉತ್ಪನ್ನಗಳು, ಸ್ಥಳದಲ್ಲಿ ತಯಾರಿಸಿಕೊಡುವ ಹಲಸಿನ, ಮಾವಿನ ಬಗೆ ಬಗೆಯ ತಿಂಡಿಗಳು ಇರುತ್ತದೆ. ನರ್ಸರಿ ಬ್ಲಾಕ್ ಪ್ರತ್ಯೇಕವಿದ್ದು, ೩-೪ ನರ್ಸರಿಯವರು ಬರುತ್ತಿದ್ದು, ಎಲ್ಲಾ ಜಾತಿಯ ಗಿಡಗಳು ಲಭ್ಯವಿರುತ್ತದೆ. ಇದರೊಂದಿಗೆ ರೈತರ ಸ್ಥಳೀಯ ಉತ್ಪನ್ನಗಳು, ಬಟ್ಟೆಗಳು, ಆಟಿಕೆಗಳು, ಔಷಧಿಗಳು ಕೃಷಿ ಪೂರಕ ಮಳಿಗೆಗಳು ಸಹ ಇರುತ್ತದೆ. ವಿಶೇಷವಾಗಿ ರೈತರ ಮನೆಯಲ್ಲಿರುವ ಉತ್ತಮ ಜಾತಿಯ ಹಲಸಿನ ಮರದ ಗಿಡಗಳನ್ನು ರೈತರು ಅಪೇಕ್ಷಿಸಿದಲ್ಲಿ ಆ ಮರದ ಗೆಲ್ಲನ್ನು ತಂದಲ್ಲಿ ಉಚಿತವಾಗಿ ಕಸಿಕಟ್ಟಿ ನೀಡಲಾಗುವುದು. ಮದರ್ ಪ್ಲಾಂಟ್ ಲಭ್ಯವಿರುತ್ತದೆ. ಇದನ್ನು ಜಾಕ್ ಅನಿಲ್‌ರವರು ಮಾಡಿಕೊಡಲಿದ್ದಾರೆ. ಇದರಿಂದ ಈಗಾಗಲೇ ಹಳ್ಳಿಯಲ್ಲಿರುವ ಅಪರೂಪದ ತಳಿಗಳನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ವೀರಪ್ಪ ಗೌಡ ಕಣ್ಕಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವು ವಿಚಾರ ಸಂಕಿರಣಗಳು ನಡೆಯಲಿದ್ದು, ಇದರ ಬಗ್ಗೆ ಡಾ.ಎನ್.ಎ.ಜ್ಞಾನೇಶ್ ಮಾಹಿತಿ ನೀಡಿ, “ಜೂ. ೧೨ರಂದು ಉದ್ಘಾಟನಾ ಕಾರ್ಯಕ್ರಮದ ಬಳಿಕ ಹಲಸು, ಮಾವು, ಗೇರು ಮೌಲ್ಯವರ್ದಿತ ಉತ್ಪನ್ನಗಳ ಬಗ್ಗೆ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಲಿದ್ದಾರೆ.
ಜೂ. ೧೩ರಂದು ಬೆಳಿಗ್ಗೆ ೧೦ ಗಂಟೆಗೆ ಕಾಫಿ ಗಿಡಗಳ ನಿರ್ವಹಣೆ ಕುರಿತು ಕಾಫಿ ಮಂಡಳಿಯ ವಿಜ್ಞಾನಿ ಡಾ.ಎಸ್.ಎ. ನಡಾಫ್ ಮಾಹಿತಿ ನೀಡುವರು. ಮಧ್ಯಾಹ್ನ ೧೨ರಿಂದ ಕಾಳು ಮೆಣಸಿನ ನಿರ್ವಹಣೆ ಕುರಿತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಾಳು ಮೆಣಸು ಬೆಳೆಗಾರ ಸುರೇಶ ಬಲ್ನಾಡು ಮಾಹಿತಿ ನೀಡುವರು. ಜೂ. ೧೪ರಂದು ಬೆಳಿಗ್ಗೆ ೧೦ ಗಂಟೆಗೆ ಅಡಿಕೆ ಬೆಳೆಯಲ್ಲಿ ಪೋಷಾಕಾಂಶಗಳ ನಿರ್ವಹಣೆ ಕುರಿತು ಅವೆಂಚೂರ ಆಗ್ರೋ ಪ್ರೊಡಕ್ಟ್ ಆಡಳಿತ ನಿರ್ದೇಶಕ ಬಿ.ಕೆ. ವಿಶುಕುಮಾರ್, ಬೆಳಿಗ್ಗೆ ೧೧ರಿಂದ ಹಲಸಿನ ಬೀಜದ ಉಪಯುಕ್ತತೆ ಬಗ್ಗೆ ಅಭಿಜ್ಞಾನ ಫುಡ್ ಪ್ರೊಡಕ್ಟ್ ಪ್ರೈ.ಲಿ. ಆಡಳಿತ ನಿರ್ದೇಶಕ ರಾಧಾಕೃಷ್ಣ ಇಟ್ಟಿಗುಂಡಿ, ಮಧ್ಯಾಹ್ನ ೧೨ರಿಂದ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಪಿಂಗಾರ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ರಾಮ ಕಿಶೋರ್ ಮಾಹಿತಿ ನೀಡುವರು” ಎಂದು ತಿಳಿಸಿದರು.
ಸಾಧಕ ರೈತರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಹಲಸು ಮತ್ತು ಮಾವು ಕೃಷಿ ಸಾಧಕರಾದ ಸುಬ್ರಾಯ ಭಟ್ ಮಾಪಲತೋಟ, ಶ್ರೀಮತಿ ಕುಮುದಾ ಲಕ್ಷೀಶ ಗಬ್ಬಡ್ಕ, ಗೋವಿಂದ ಭಟ್ ಉಬರಡ್ಕ
ಶ್ರೀಮತಿ ಸುಜಾತ ಭಾಸ್ಕರ ಕಂಬಳಿಮೂಲೆ ಮತ್ತು ನಮಾಮಿ ಬಳಗ ಸುಳ್ಯ ಇವರುಗಳನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ವಿವಿಧ ಕೃಷಿ ಸಾಧಕರ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಮಹಿಳೆಯರಿಗಾಗಿ ವಿಶೇಷವಾಗಿ ಜೂ. ೧೪ರಂದು ಅಪರಾಹ್ನ ೩ರಿಂದ ೪ರವರೆಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ನಡೆಯಲಿದ್ದು, ಹಲಸು, ಮಾವು, ಗೇರು ಉತ್ಪನ್ನಗಳಿಂದ ಮನೆಯಲ್ಲಿಯೇ ಅಡುಗೆ ತಯಾರಿಸಿ ತಂದು ಪ್ರದರ್ಶನಕ್ಕೆ ಇಡಬಹುದು ಎಂದು ಪ್ರಚಾರ ಸಮಿತಿಯ ಸಂಚಾಲಕ ಹರೀಶ್ ಬಂಟ್ವಾಳ್ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಹಲಸು, ಮಾವು ಮೇಳ ಜಾತ್ರೆಯಂತೆ ನಡೆಯಬೇಕೆಂಬ ದೃಷ್ಠಿಯಿಂದ ಪ್ರತಿದಿವಸ ಸಂಜೆ ೬.೩೦ ರಿಂದ ೮.೩೦ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,
ಜೂ. ೧೨ರಂದು ಸಂಜೆ ೬ರಿಂದ ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ವೈಭವ, ೭ ರಿಂದ ವಿದುಷಿ ಇಂದುಮತಿ ನಾಗೇಶ್ ನಿರ್ದೇಶನದಲ್ಲಿ ನಟರಾಜ ನೃತ್ಯನಿಕೇತನ ರಿ. ಕಲ್ಲುಗುಂಡಿ ಸುಳ್ಯ ಶಾಖೆಯ ಶಿಷ್ಯ ವೃಂದದಿಂದ ನೃತ್ಯ ವೈಭವ ನಡೆಯಲಿದೆ.
ಜೂ. ೧೩ರಂದು ಸಂಜೆ ೬ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ದೇಲಂಪ್ಪಾಡಿ ಮಹಿಳಾ ಯಕ್ಷಗಾನ ತಂಡದವರಿಂದ ದಕ್ಷಯಜ್ಞ ನಡೆಯಲಿದೆ. ಸಂಜೆ ೭ರಿಂದ ಸ್ಥಳೀಯ ಕಲಾವಿದರಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ.
ಕೊನೆಯ ದಿನ ಜೂ. ೧೪ರಂದು ಸಂಜೆ ೪ರಿಂದ ಪಂಡಿತ್ ಸಿದ್ದಲಿಂಗೇಶ್ ಕಣವಿ, ಗಾನಯೋಗಿ ಮ್ಯೂಸಿಕ್ ಅಕಾಡೆಮಿ ಬೆಂಗಳೂರು ಇವರ ಶಿಷ್ಯರಾದ ಮಾವಂಜಿ ಸಹೋದರಿಯರಿಂದ ಸುಗಮ ಸಂಗೀತ, ಸಂಜೆ ೪.೩೦ರಿಂದ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಅಭಿಷೇಕ ಕಣೆಮರಡ್ಕ ಇವರಿಂದ ಕೂಚುಪುಡಿ ನೃತ್ಯ, ಸಂಜೆ ೬.೩೦ರಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಶ್ರೀಮತಿ ಮಧುರಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಳದ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ಮುಂಡೋಳಿಮೂಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ, ಟೀಂ ಉಬಾರ್‌ನ ರಾಕೇಶ್ ಪ್ರಭು ಉಪಸ್ಥಿತರಿದ್ದರು.

























































