ಅರೆಭಾಷೆ ಅಕಾಡೆಮಿಯಿಂದ ವಿಟ್ಲದಲ್ಲಿ ವಿಜೃಂಬಿಸಿದ ಆಟಿಲೊಂದು ದಿನ

ವಿಟ್ಲ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಟ್ಲದ ಗೌಡರ ಯಾನೆ ಒಕ್ಕಲಿಗರ ಸಂಘ, ಗೌಡ ಮಹಿಳಾ ಘಟಕ ಮತ್ತು ಗೌಡ ಯುವ ವೇದಿಕೆಗಳ ಜಂಟಿ ಆಶ್ರಯದಲ್ಲಿ ‘ಆಟಿಲೊಂದು ದಿನ’ ಕಾರ್ಯಕ್ರಮವು ವಿಟ್ಲದ ‘ಅಕ್ಷಯ ಭವನ’ದಲ್ಲಿ ನಡೆಯಿತು.
ಕಾರ್ಯಕ್ರಮವು ಅರೆಭಾಷೆ‌ ಅಕಾಡೆಮಿ‌ ಅಧ್ಯಕ್ಷರಾದ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ‌ ಜರುಗಿದ್ದು ಅವರು ಮಾತನಾಡುತ್ತಾ, ಸಂಸ್ಕೃತಿ ಮತ್ತು ಸಾಹಿತ್ಯಗಳ ಪೋಷಣೆಯೊಂದಿಗೆ ಅರೆಭಾಷೆಯನ್ನು ಪುಷ್ಟೀಕರಿಸುವ ಕಾರ್ಯಗಳನ್ನು ಅಕಾಡೆಮಿಯು ನಿರಂತರವಾಗಿ ಮಾಡುತ್ತಿದ್ದು ವಿಟ್ಲ ಜನರಿಗೆ ಅರೆಭಾಷೆ ಮೇಲೆ ಇರುವ ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಅಲ್ಲದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು.
ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಸುಕುಮಾರ್ ಅವರು ದೀಪ ಪ್ರಜ್ವಲಿಸಿ ಮಾತನಾಡಿ ಸಾಂಸ್ಕೃತಿಕ ಜಾಗೃತಿ ಮತ್ತು ರಕ್ಷಣೆಗಳ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಇಂದಿನ ಅವಶ್ಯಕತೆಯಾಗಿದೆ ಎಂದರು.
ಆಟಿ’ ಆಚರಣೆಯಲ್ಲ, ಇತಿಹಾಸದ ನೆನಪು: ಸೀತಾರಾಮ ಕೇವಳ
ಸಂಪನ್ಮೂಲ‌ ವ್ಯಕ್ತಿಯಾಗಿ‌ ಭಾಗವಹಿಸಿ ಪ್ರಧಾನ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಂಶುಪಾಲ ಮತ್ತು ಜೇಸೀ ರಾಷ್ಟ್ರೀಯ ತರಬೇತುದಾರರಾದ ಸೀತಾರಾಮ ಕೇವಳ ಮಾತನಾಡಿ ಇಂದು ಆಟಿ ಆಚರಣೆ ಎಂಬುದು ಇತಿಹಾಸದ ಪ್ರಜ್ಞೆಯ ನೆಲೆಯಲ್ಲಿ ಪ್ರಾಮುಖ್ಯವಾಗಿದೆ. ಎಳೆಯ ತಲೆಮಾರಿಗೆ ಅಂದಿನ ಕಾಲದ ಆಹಾರ ಪದ್ಧತಿ, ವಿಧಿ ನಿಷೇಧಗಳು ಮತ್ತು ಆರಾಧನ ಪದ್ಧತಿಗಳ ವಿವರಗಳನ್ನು ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.
ವಿಶೇಷ ಗೌರವಾರ್ಪಣೆ
ವಿಟ್ಲ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಅಮಿತಾಕೃಷ್ಣ ಕೊಡಿಪಾಡಿಗುತ್ತು ಇವರನ್ನು ಅಕಾಡೆಮಿ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.
ಆಕರ್ಷಕವಾಗಿದ್ದ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳು
ಅರೆಭಾಷೆಯ ಪದ್ಯ, ಸೋಬಾನೆಗಳ ಗಾಯನ, ಮದುವೆಯಲ್ಲಿ ಹೆಣ್ಣಿಳಿಸಿಕೊಡುವ ಸಾಹಿತ್ಯ ಗಾಯನ ಸ್ಪರ್ಧೆಗಳು, ನೃತ್ಯ ಮತ್ತು
ನೃತ್ಯ ರೂಪಕಗಳ ಪ್ರದರ್ಶನಗಳು ಆಕರ್ಷಕವಾಗಿ ಮೂಡಿಬಂದವು.
ಆಟಿ ತಿನಿಸು – ಭೋಜನ
ಸುಮಾರು 45 ಬಗೆಗಳ ಆಟಿ ಖಾದ್ಯಗಳನ್ನು ಆಗಮಿಸಿದ ಸರ್ವರಿಗೂ ಬಡಿಸಲಾಯಿತು. ಇವೆಲ್ಲವುಗಳನ್ನು ಸಂಘದ ಸದಸ್ಯರು ಅವರವರ ಮನೆಗಳಲ್ಲಿ ತಯಾರಿಸಿ ತಂದದ್ದು ವಿಶೇಷವಾಗಿತ್ತು.
ದಂಪತಿಗಳಿಗೆ ಮನೋಲ್ಲಾಸಕರ ಸ್ಪರ್ಧೆಗಳು
ವಿಶೇಷವಾಗಿ ಆಯೋಜಿಸಲಾಗಿದ್ದ ದಂಪತಿಗಳ ನಡಿಗೆ ಮತ್ತು ನೃತ್ಯ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದ ಸುಮಾರು ಇಪ್ಪತ್ತಕ್ಕೂ ಅಧಿಕ ದಂಪತಿಗಳು ಭಾಗವಹಿಸಿದ್ದು ಅಪ್ಯಾಯವಾಗಿತ್ತು.
ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಕಣ್ಕಲ್, ಗೌರವಾಧ್ಯಕ್ಷ ಗಿರಿಯಪ್ಪ ಗೌಡ ಶಾಂತಿಲ, ಗೌಡರ ಯುವ ವೇದಿಕೆ ಅಧ್ಯಕ್ಷ ದಿನೇಶ್ ಮಾಡ್ತೇಲ್, ಅಕಾಡೆಮಿ ಸದಸ್ಯೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯೆ ಸಂಚಾಲಕರಾದ ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು , ವಿಟ್ಲ ಗೌಡ ಮಹಿಳಾ ಘಟಕಾಧ್ಯಕ್ಷೆ ಶ್ರೀಮತಿ ಅಮಿತಾಕೃಷ್ಣ ಕುಡಿಪ್ಪಾಡಿಗುತ್ತು ವಂದನಾರ್ಪಣೆ. ಪ್ರೇಮಲತಾ ಹಡಿಲು,ಪ್ರೇಮಲತಾ ಗಡದಕೋಡಿ, ಪ್ರಮೀಳಾ ಕಾಣಿಚಾರ್ ಪ್ರಾರ್ಥನೆ, ವಿಶ್ವನಾಥ ಕುಳಾಲ್, ತನುಷ ಗಿರಿನಿವಾಸ ನಿರೂಪಣೆಗಳಲ್ಲಿ ಸಹಕರಿಸಿದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top