ಕಲ್ಲುಗುಂಡಿಯಲ್ಲಿ ಹಾಲ್ಟ್ ಆಗುತ್ತಿದ್ದ ಬಸ್‌ಗಳಿಗೆ ಕೊನೆಗೂ ಮುಕ್ತಿ

ಕೊಯನಾಡು, ಸೆ.22: ಸುಳ್ಯದಿಂದ ಸಂಜೆ ಕೊಯನಾಡಿಗೆ ಸಂಚರಿಸಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳು ಕಲ್ಲುಗುಂಡಿಯಲ್ಲೇ ರಾತ್ರಿ ಹಾಲ್ಟ್ ಆಗುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಕೊಯನಾಡಿನಲ್ಲಿ ಬಸ್ ನಿಲುಗಡೆಗೆ ಸ್ಥಳ ಹಾಗೂ ಚಾಲಕ–ನಿರ್ವಾಹಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ, ಇನ್ನು ಮುಂದೆ ಸಂಜೆ 6 ಮತ್ತು 7 ಗಂಟೆಯ ಬಸ್‌ಗಳು ಕೊಯನಾಡಿನಲ್ಲೇ ಹಾಲ್ಟ್ ಆಗಲಿವೆ.
ಸಂಜೆ ವೇಳೆಯಲ್ಲಿ ಬಸ್‌ಗಳು ಕಲ್ಲುಗುಂಡಿಯಲ್ಲೇ ನಿಲ್ಲುತ್ತಿದ್ದುದರಿಂದ ಕೊಯನಾಡು ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಬಸ್ ಸೌಲಭ್ಯ ಇಲ್ಲದೆ ರಿಕ್ಷಾ ಹಾಗೂ ಖಾಸಗಿ ವಾಹನಗಳ ಮೂಲಕ ಮನೆ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು.
ಸಮಸ್ಯೆ ಕುರಿತು ಕೊಯನಾಡು ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಂಗಳವಾರ ಸುಳ್ಯ ಡಿಪೋ ಮ್ಯಾನೇಜರ್ ಸತ್ಯಲತಾ ಅವರು ಕೊಯನಾಡಿಗೆ ಭೇಟಿ ನೀಡಿದರು. ಗ್ರಾಮಸ್ಥರೊಂದಿಗೆ ಚರ್ಚಿಸಿದ ಬಳಿಕ ಬಸ್ ನಿಲುಗಡೆ ಸ್ಥಳ ಹಾಗೂ ಸಿಬ್ಬಂದಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸುರೇಶ್ ಪಿ.ಎಲ್. ಮಾತನಾಡಿ, ಚಾಲಕ–ನಿರ್ವಾಹಕರಿಗಾಗಿ ಕೊಯನಾಡು ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬಸ್ ತಿರುಗಲು ಹಾಗೂ ರಾತ್ರಿ ನಿಲ್ಲಿಸಲು ಅಗತ್ಯವಿರುವ ಸ್ಥಳವನ್ನು ಜಲ್ಲಿ ಹಾಕಿ ಸರಿಪಡಿಸಲಾಗಿದೆ. ಹೀಗಾಗಿ ಬಸ್‌ಗಳನ್ನು ಕೊಯನಾಡಿನಲ್ಲೇ ಹಾಲ್ಟ್ ಮಾಡುವಂತೆ ಮನವಿ ಮಾಡಿದರು.
ಸ್ಥಳ ಪರಿಶೀಲನೆಯ ಬಳಿಕ ಡಿಪೋ ಮ್ಯಾನೇಜರ್ ಸತ್ಯಲತಾ ಅವರು ಸಂಜೆ ಕಲ್ಲುಗುಂಡಿಯಲ್ಲಿ ನಿಲ್ಲುತ್ತಿದ್ದ ಬಸ್‌ಗಳು ಇನ್ನು ಮುಂದೆ ಕೊಯನಾಡಿನಲ್ಲೇ ಹಾಲ್ಟ್ ಆಗಲಿವೆ ಎಂದು ಭರವಸೆ ನೀಡಿದರು.
ಮಾತುಕತೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಆಡಳಿತ ಕಾರ್ಯದರ್ಶಿ ಸೀತಾರಾಮ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಕನ್ಯಾನ, ಕೆಎಸ್‌ಆರ್‌ಟಿಸಿ ಸುಳ್ಯ ಘಟಕದ ಕಿರಿಯ ಸಹಾಯಕ ಅಬುಸಾಲಿ, ರಾಜೇಶ್ವರಿ ಕೆ.ಕೆ., ಹನೀಫ್ ಎಸ್.ಪಿ., ರಿತಿನ್ ಡೆಮ್ಮಲೆ ಸೇರಿದಂತೆ ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ ಡಿಪೋ ಮ್ಯಾನೇಜರ್ ಅವರು ಸುಳ್ಯ–ಕೊಯನಾಡು ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದರು.











































Leave a Comment

Your email address will not be published. Required fields are marked *

error: Content is protected !!
Scroll to Top