ಸುಳ್ಯ: ಸಾಹಿತ್ಯವೆಂಬುದು ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾದ ಜ್ಞಾನವಲ್ಲ; ಅದು ಮನಸ್ಸುಗಳನ್ನು ಬೆಸೆಯುವ, ಬದುಕಿಗೆ ಮೌಲ್ಯಗಳನ್ನು ತುಂಬುವ ಮತ್ತು ಮುಂದಿನ ತಲೆಮಾರಿಗೆ ಸಂಸ್ಕೃತಿಯ ಬೆಳಕನ್ನು ಹಸ್ತಾಂತರಿಸುವ ಅಮೂಲ್ಯ ಸಾಧನ. ಇಂತಹ ಸಾಹಿತ್ಯದ ಕಂಪನ್ನು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮನದಂಗಳಕ್ಕೆ ತಲುಪಿಸುವ ಪ್ರಯತ್ನ ಸಾರ್ಥಕ ತೃಪ್ತಿ ನೀಡಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ಪಂಜ ಹೋಬಳಿ ಘಟಕ, ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ನಾವು ವಿವಿಧ ಶಾಲೆಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸುಮಾರು 6ರಿಂದ 7 ಸಾವಿರ ವಿದ್ಯಾರ್ಥಿಗಳನ್ನು ತಲುಪಿದ್ದೇವೆ. ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವ ಈ ಪ್ರಯತ್ನ ನಮ್ಮ ಪಾಲಿಗೆ ಅತ್ಯಂತ ಸಂತೃಪ್ತಿಯ ಸಂಗತಿಯಾಗಿದೆ. ಸಾಹಿತ್ಯದ ಸೇವೆ ಎಂದರೆ ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ಅಕ್ಷರದ ಪ್ರೀತಿಯನ್ನು ಬಿತ್ತಿದಂತೆ. ಈ ಕಾರ್ಯ ನಿರಂತರವಾಗಿ ಮುಂದುವರಿಯಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಹಳೆಗೇಟು ಹೊಸಗದ್ದೆಯಲ್ಲಿರುವ ಚಂದ್ರಶೇಖರ ಪೇರಾಲ್ ಅವರ ‘ಅಕ್ಷರ ನಿವಾಸ’ದ ವಠಾರದಲ್ಲಿ ನಡೆದ ಸಮಾರೋಪ ಸಮಾರಂಭವು ಸಾಹಿತ್ಯಾಸಕ್ತರ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಕೇವಲ ಆಚರಣೆಗಳಿಗೆ ಸೀಮಿತವಾಗದೆ ನಿರಂತರ ಚಳವಳಿಯ ರೂಪದಲ್ಲಿ ಸಾಗಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಚಂದ್ರಶೇಖರ ಪೇರಾಲ್ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಎಲ್ಲ ಅರ್ಹತೆಗಳಿದ್ದು, ಮುಂದಿನ ದಿನಗಳಲ್ಲಿ ಅವರು ಆ ಜವಾಬ್ದಾರಿಯನ್ನು ಅಲಂಕರಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಲೀಲಾದರ್, ಪ್ರಕಾಶ್ ಮೂಡಿತ್ತಾಯ, ಲೋಕೇಶ್ ಊರುಬೈಲು ಹಾಗೂ ಅಭಿಷೇಕ್ ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದ ಸೇವೆಯ ಗೌರವಾರ್ಥವಾಗಿ ಚಂದ್ರಶೇಖರ ಪೇರಾಲ್ ದಂಪತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸನ್ಮಾನಿಸಿದರು.
ಹೇಮನಾಥ ಕುರುಂಜಿ ಮಾತನಾಡಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ವಲಯದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ವಲಯದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ತಾಲೂಕು ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ದಯಾನಂದ ಆಳ್ವ ಹಾಗೂ ಗೌರವ ಕಾರ್ಯದರ್ಶಿ ತೇಜಸ್ವಿ ಕಡೆಪಾಲ ಉಪಸ್ಥಿತರಿದ್ದರು.
ಸಂಚಾಲಕರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಕೇಶವ ಮಾಸ್ತರ್ ಹೊಸಗದ್ದೆ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ತೇಜಸ್ವಿ ಕಡೆಪಾಲ ವಂದಿಸಿದರು. ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಅಂಗವಾಗಿ ಶ್ರೇಯಾ ಮೇರ್ಕಜೆ ಹಾಗೂ ಅಭಿಷೇಕ್ ಕಣೆಮರಡ್ಕ ಅವರಿಂದ ಮನಮೋಹಕ ನೃತ್ಯ ಪ್ರದರ್ಶನ ನಡೆಯಿತು. ಕೆ.ಆರ್. ಗೋಪಾಕೃಷ್ಣ ಹಾಗೂ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಗಾಯನ ಕಾರ್ಯಕ್ರಮವು ಸಾಹಿತ್ಯ ಸಂಭ್ರಮಕ್ಕೆ ಸಂಗೀತದ ಮೆರುಗು ನೀಡಿತು.
ಅಕ್ಷರದ ಮೂಲಕ ಅರಿವಿನ ದೀಪ ಹಚ್ಚಿ, ಸಾಹಿತ್ಯದ ಮೂಲಕ ಹೊಸ ತಲೆಮಾರಿನ ಮನಸ್ಸುಗಳನ್ನು ರೂಪಿಸುವ ಆಶಯದೊಂದಿಗೆ ನಡೆದ ಸಾಹಿತ್ಯ ಸಂಭ್ರಮದ ಸಮಾರೋಪವು ಕನ್ನಡದ ಮೇಲಿನ ಪ್ರೀತಿ, ಭಾಷಾಭಿಮಾನ ಹಾಗೂ ಸಾಹಿತ್ಯ ಸೇವೆಯ ಸಾರ್ಥಕತೆಯನ್ನು ಮತ್ತೊಮ್ಮೆ ಸಾರಿತು.
ಸಾಹಿತ್ಯ ಸೇವೆ ನನಗೆ ಆತ್ಮ ತೃಪ್ತಿ ತಂದಿದೆ: ಚಂದ್ರಶೇಖರ ಪೇರಾಲ್

















