ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ: ಎಸ್‌ಐ ಉದಯರವಿ

ಸುಳ್ಯ: ಯುವಜನರು ಅಪರಾಧ ಚಟುವಟಿಕೆಗಳಿಂದ ದೂರವಿದ್ದು, ರಸ್ತೆ ಸುರಕ್ಷತೆ ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತರಾಗಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಎಂ.ವೈ. ಕರೆ ನೀಡಿದರು.
ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಅನೇಕ ಅಪಘಾತಗಳನ್ನು ತಪ್ಪಿಸಬಹುದು. ಮಾದಕ ದ್ರವ್ಯಗಳ ದುಷ್ಪರಿಣಾಮಗಳನ್ನು ಅರಿತುಕೊಂಡು ಸ್ನೇಹಿತರಲ್ಲಿಯೂ ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ (ರಿ.) ಸುಳ್ಯದ ಕಾರ್ಯದರ್ಶಿ ಹೇಮನಾಥ ಕೆ.ವಿ. ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ. ಯುವ ರೆಡ್‌ಕ್ರಾಸ್ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದ ಬಗ್ಗೆ ಕಾಳಜಿ ಬೆಳೆಸಲು ಸಹಕಾರಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಮಾತನಾಡಿ, ಯುವ ರೆಡ್‌ಕ್ರಾಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ. ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.
ಗೌರವ ಅತಿಥಿ ಚಂದ್ರಶೇಖರ ಪೇರಾಲು ಮಾತನಾಡಿ, ರೆಡ್‌ಕ್ರಾಸ್ ಮೂಲಕ ದೊರೆಯುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮಾದರಿಯಾಗಬೇಕು. ಯುವಜನರು ದೇಶದ ಭವಿಷ್ಯವಾಗಿದ್ದು, ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣರಾಗಬೇಕು ಎಂದು ಹೇಳಿದರು.
ಯುವ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುದ್ಧದಲ್ಲಿ ಗಾಯಗೊಂಡವರ ರಕ್ಷಣೆಯ ಉದ್ದೇಶದಿಂದ ಆರಂಭಗೊಂಡ ರೆಡ್‌ಕ್ರಾಸ್ ಇಂದು ಮಾನವೀಯ ಸೇವೆಯ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳ ಬೆಳವಣಿಗೆಗೆ ಇಂತಹ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದರು.
ಪ್ರೊಬೆಷನರಿ ಉಪನಿರೀಕ್ಷಕ ಕೃಷ್ಣ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಧರ್ ವಿ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿನಂದನ್, ಯುವ ರೆಡ್‌ಕ್ರಾಸ್ ಘಟಕದ ನಾಯಕರಾದ ಸೃಜನ್, ಸಿಂಚನ ಮೊದಲಾದವರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸದಸ್ಯರಾದ ಅನ್ಸೀಯ, ಸೌಪರ್ಣಿಕ, ಮೋನಿಷಾ, ನಯನಾ ಹಾಗೂ ಕೃತಿ ಪ್ರಾರ್ಥಿಸಿದರು. ನಿತೀಶ್ ಸ್ವಾಗತಿಸಿ, ಲಿಯಾ ತಸ್ನೀಮ್ ವಂದಿಸಿದರು. ನಮ್ರತಾ ಹಾಗೂ ಮೋನಿಷಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.















Leave a Comment

Your email address will not be published. Required fields are marked *

error: Content is protected !!
Scroll to Top