ಸುಳ್ಯ: ಬಹುನಿರೀಕ್ಷಿತ ಸುಳ್ಯ ತಾಲೂಕಿನ 110 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಸೆ.28ರಂದು ತಾಲೂಕು ಪಂಚಾಯತ್‌ನ ಶಾಸಕರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನೆಯಡಿ ಒಟ್ಟು 89 ಟವರ್‌ಗಳ ಫೌಂಡೇಷನ್ ನಿರ್ಮಾಣವಾಗಬೇಕಿದ್ದು, ಈ ಪೈಕಿ 57 ಟವರ್‌ಗಳ ಫೌಂಡೇಷನ್ ಕಾಮಗಾರಿ ಪೂರ್ಣಗೊಂಡಿದೆ. 6 ಟವರ್‌ಗಳ ನಿರ್ಮಾಣವೂ ಮುಕ್ತಾಯಗೊಂಡಿದ್ದು, ಇನ್ನೂ 32 ಟವರ್‌ಗಳ ಫೌಂಡೇಷನ್ ಕಾಮಗಾರಿ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾಮಗಾರಿಯ ಪ್ರಮುಖ ಹಂತವಾಗಿರುವ ಕಾರಿಡಾರ್ ಸರ್ವೆಗೆ ಇನ್ನೂ 3ರಿಂದ 4 ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು. ಹಿಂದಿನ ಎರಡು ಸರ್ವೆಗಳ ಮಾರ್ಕಿಂಗ್ ಅಳಿಸಿಹೋಗಿರುವ ಹಿನ್ನೆಲೆಯಲ್ಲಿ ಲೈನ್ ಹಾದುಹೋಗುವ ಜಾಗಗಳ ಮಾಲೀಕತ್ವದ ಕುರಿತು ಸ್ಪಷ್ಟತೆ ಪಡೆಯಲು ಕಂದಾಯ ಇಲಾಖೆಯ ಸಹಯೋಗದಲ್ಲಿ ಜಂಟಿ ಕಾರಿಡಾರ್ ಸರ್ವೆ ನಡೆಸಬೇಕಿದೆ ಎಂದು ತಿಳಿಸಿದರು.
ಈಗಾಗಲೇ ಲೈನ್ ಹಾದುಹೋಗಿರುವ ಪ್ರದೇಶಗಳಲ್ಲಿ ಆರ್‌ಟಿಸಿ ದಾಖಲೆಗಳಲ್ಲಿರುವ ಜಮೀನು ಮಾಲೀಕರಿಗೆ ಪರಿಹಾರ ಮೊತ್ತ ಪಾವತಿಸಲಾಗಿದೆ. ಬಾಕಿ ಪ್ರದೇಶಗಳಲ್ಲಿ ಜಂಟಿ ಸರ್ವೆ ನಡೆಸಿ, ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಕಾಮಗಾರಿ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
15 ಪ್ರಕರಣಗಳು ನ್ಯಾಯಾಲಯದಲ್ಲಿ
ಕಾಮಗಾರಿಗೆ ಸಂಬಂಧಿಸಿದಂತೆ 10 ಸ್ಥಳಗಳ ಆಕ್ಷೇಪಣೆ ಪ್ರಕರಣಗಳು ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಅವು ಇತ್ಯರ್ಥಗೊಂಡಿವೆ. ಪ್ರಸ್ತುತ 13 ಪ್ರಕರಣಗಳು ಡಿಸಿ ನ್ಯಾಯಾಲಯದಲ್ಲಿ ಹಾಗೂ 2 ಪ್ರಕರಣಗಳು ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ 6 ಸ್ಥಳಗಳಲ್ಲಿ ಮರ ತೆರವುಗೊಳಿಸುವ ಕಾರ್ಯ ಬಾಕಿಯಿದೆ. ಮರ ತೆರವುಗಾಗಿ ಈಗಾಗಲೇ ಹಣ ಪಾವತಿಸಲಾಗಿದ್ದರೂ, ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ವಿಳಂಬಕ್ಕೆ ಇನ್ನು ಅವಕಾಶವಿಲ್ಲ: ಶಾಸಕಿ
ಕಾಮಗಾರಿ ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಸರಬರಾಜು ವ್ಯವಸ್ಥೆಯ ಮೇಲೂ ಇದರ ಪರಿಣಾಮ ಬೀರುತ್ತಿದ್ದು, ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಅಗತ್ಯವಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಬಾಕಿ ಇರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಕ್ಟೋಬರ್‌ನಲ್ಲೇ ಜಂಟಿ ಕಾರಿಡಾರ್ ಸರ್ವೆ ನಡೆಸಿ, ಜಮೀನು ಹಾಗೂ ಮಾರ್ಗಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಬೇಕು. ಕಾಮಗಾರಿಯ ಪ್ರಗತಿಯನ್ನು ಪ್ರತಿ ತಿಂಗಳು ಪರಿಶೀಲಿಸುವಂತೆ ಸೂಚಿಸಿದ ಶಾಸಕಿ, ಮಾರ್ಚ್ ತಿಂಗಳೊಳಗೆ 110 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಜಿ.ಎನ್. ಚೈತನ್ಯ, ಕಾರ್ಯನಿರ್ವಾಹಕ ಇಂಜಿನಿಯರ್ ಜಯಪ್ರಸಾದ್, ಸಹಾಯಕ ಇಂಜಿನಿಯರ್ ವಿಷ್ಣು ನಾಯರ್ ಎಂ.ಟಿ., ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಶ್ರೀನಾಥ್ ಆಚಾರ್ಯ ಯು., ಸಚಿನ್ ಕುಮಾರ್, ಗುತ್ತಿಗೆದಾರ ಚಂದ್ರಶೇಖರ ರೆಡ್ಡಿ ಎ., ಭೂದಾಖಲೆಗಳ ಸಹಾಯಕ ನಿರ್ದೇಶಕ ಶ್ರೀನಿವಾಸಮೂರ್ತಿ, ತಾಲೂಕು ಸರ್ವೆಯರ್ ಜಗದೀಶ್ ಜಿ., ಪುತ್ತೂರು ಎ.ಸಿ. ಕಚೇರಿ ವ್ಯವಸ್ಥಾಪಕ ನಾಗೇಂದ್ರ ನಾಯ್ಕ, ಪುತ್ತೂರು ತಾಲೂಕು ಕಚೇರಿಯ ಚೆನ್ನಪ್ಪ ಇ.ಎಂ., ಶಾಸಕರ ಆಪ್ತ ಕಾರ್ಯದರ್ಶಿಗಳಾದ ಹರೀಶ್, ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.
ಮಾರ್ಚ್ ಒಳಗೆ 110 ಕೆ.ವಿ. ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಲು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ

























