ಸುಳ್ಯ: ಇಲ್ಲಿನ ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ 6ನೇ ವರ್ಷದ ದಸರಾ ಗೊಂಬೆ ಹಬ್ಬ-2026ರ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು. ಶ್ರೀ ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಂದೆ-ತಾಯಿ ಇಬ್ಬರೂ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯ. ಶಾಲೆ ಮತ್ತು ಪೋಷಕರ ನಡುವಿನ ಸಹಕಾರ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಹಾಗೂ ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಅಧ್ಯಕ್ಷ ಶುಭಾಕರ ಬಿ.ಸಿ. ಅವರು ಮಾತನಾಡಿ, ದಸರಾ ಗೊಂಬೆ ಹಬ್ಬವು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಆಚರಣೆಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಸಂಪ್ರದಾಯಗಳ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಿ, ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಶಾಲೆಯ ಸಂಚಾಲಕಿ ಗೀತಾಂಜಲಿ ಟಿ.ಜಿ. ಅವರು ಗೊಂಬೆ ಹಬ್ಬದ ಹಿನ್ನೆಲೆ, ಅದರ ಸಾಂಸ್ಕೃತಿಕ ಮಹತ್ವ ಹಾಗೂ ಅದರೊಂದಿಗೆ ಬೆಸೆದುಕೊಂಡಿರುವ ಸುಂದರ ಕಥೆಗಳನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ವಿವರಿಸಿದರು.
ಕುಮಾರಿ ಚಿನ್ಮಯಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಿರ್ಮಲಾ ಅವರು ಕಾರ್ಯಕ್ರಮ ನಿರೂಪಿಸಿದರು.
ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ 6ನೇ ವರ್ಷದ ದಸರಾಗೊಂಬೆ ಹಬ್ಬ ಉದ್ಘಾಟನೆ













