ಸುಳ್ಯ: ವಿದ್ಯೆ, ಜ್ಞಾನ ಹಾಗೂ ಸಕಲ ಶುಭಗಳ ಅಧಿದೇವತೆ ಶ್ರೀ ಶಾರದಾ ಮಾತೆಯ ಆರಾಧನೆಯೊಂದಿಗೆ ಸುಳ್ಯ ದಸರಾ ಮಹೋತ್ಸವಕ್ಕೆ ಅ.16ರಂದು ಭಕ್ತಿಪೂರ್ವಕ ಚಾಲನೆ ನೀಡಲಾಯಿತು. ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಶಾರದಾ ಮಂಟಪದಲ್ಲಿ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನೆರವೇರಿದ್ದು, ನಗರದಲ್ಲಿ ನವರಾತ್ರಿ ಸಂಭ್ರಮಕ್ಕೆ ಧಾರ್ಮಿಕ ಕಳೆ ಮೂಡಿದೆ.
ಸುಳ್ಯ ಶಾಸ್ತ್ರಿ ವೃತ್ತದ ಸಮೀಪದಲ್ಲಿರುವ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಆವರಣದಲ್ಲಿ ಪುರೋಹಿತ ನಾಗರಾಜ ಭಟ್ ಅವರು ಶ್ರೀ ಶಾರದಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಪೂಜೆಯ ಬಳಿಕ ಭಕ್ತಿಭಾವದಿಂದ ಅಲಂಕೃತಗೊಂಡ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ವಾದ್ಯಘೋಷಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿದ ಭವ್ಯ ಮೆರವಣಿಗೆಯು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿರುವ ಶಾರದಾ ಮಂಟಪವನ್ನು ತಲುಪಿತು.
ಬಳಿಕ ಶಾರದಾ ಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನೆರವೇರಿಸಲಾಯಿತು. ವಿದ್ಯಾದೇವತೆಯ ದರ್ಶನ ಪಡೆದು ಭಕ್ತರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಶಾರದಾ ಮಾತೆಯ ಆರಾಧನೆಯೊಂದಿಗೆ ಸುಳ್ಯ ದಸರಾ ಮಹೋತ್ಸವಕ್ಕೆ ಶುಭಾರಂಭ ದೊರೆತಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತರು ಎದುರು ನೋಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಗೋಕುಲದಾಸ್ ಕೆ., ಶ್ರೀ ಶಾರದಾಂಬ ಸೇವಾ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ., ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ನ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಕಾರ್ಯದರ್ಶಿ ರಾಜು ಪಂಡಿತ್ ಕೆ., ವೆಂಕಪ್ಪ ಗೌಡ ಎಂ., ಜಯಪ್ರಕಾಶ್ ರೈ ಎನ್., ಬೂಡು ರಾಧಾಕೃಷ್ಣ ರೈ, ಸುನಿಲ್ ಕುಮಾರ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲ್, ಜನಾರ್ದನ ದೋಳ, ಲತಾ ಮಧುಸೂದನ್ ರೊ., ತೀರ್ಥರಾಮ ಜಾಲ್ಸೂರು, ಯೋಜನಾಧಿಕಾರಿ ಮಾಧವ ಗೌಡ, ದಿನೇಶ್ ಅಂಬೆಕಲ್ಲು, ವಿಕ್ರಮ್, ಸತೀಶ್ ಕೆ.ಜಿ., ಶಶಿಧರ ಎಂ.ಜೆ., ಸತೀಶ್ ಎಂ.ಕೆ., ವಾಸುದೇವ ನಾಯಕ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಭಕ್ತಿಭಾವದ ನಡುವೆ ಸುಳ್ಯ ದಸರಾ ಮಹೋತ್ಸವಕ್ಕೆ ಚಾಲನೆ













