ಸುಳ್ಯ: ಹಿರಿಯರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಮಕ್ಕಳು ಕೂಡ ಸುಳ್ಯ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾತೆಯರು ಪ್ರೇರೇಪಿಸಬೇಕು. ಜಾತಿ, ಧರ್ಮ, ಪಕ್ಷ ಹಾಗೂ ರಾಜಕೀಯದ ಹಂಗಿಲ್ಲದೆ ಧಾರ್ಮಿಕತೆಯನ್ನು ಕಾಪಾಡುವಲ್ಲಿ ಸುಳ್ಯ ದಸರಾ ತನ್ನದೇ ಆದ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ ಎಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಮರ್ಕಂಜದ ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ಧಮಠದ ಧರ್ಮದರ್ಶಿಗಳಾದ ರಾಜೇಶನಾಥಜೀ ಹೇಳಿದರು.
ಅ.16ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ 55ನೇ ವರ್ಷದ ಶ್ರೀ ಶಾರದಾಂಬ ಉತ್ಸವದ ಅಂಗವಾಗಿ ಸುಳ್ಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಳ್ಯ ದಸರಾ ಧಾರ್ಮಿಕತೆ, ಭಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಒಗ್ಗೂಡಿಸುವ ಮಹತ್ವದ ಉತ್ಸವವಾಗಿದೆ. ಹಿರಿಯರು ಬೆಳೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮಕ್ಕಳು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾತೆಯರು ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ವಹಿಸಿದ್ದರು. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿ ಮಾಧವ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ. ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಉಪಾಧ್ಯಕ್ಷ ಬೆಳ್ಯಪ್ಪ ಗೌಡ ಬಳ್ಳಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಲತಾ ಮಧುಸೂದನ್, ಕಾರ್ಯದರ್ಶಿ ಶ್ವೇತಾ ಪ್ರಶಾಂತ್, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್. ಹಾಗೂ ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾತಿ, ಧರ್ಮ, ಪಕ್ಷ ರಾಜಕೀಯದ ಹಂಗಿಲ್ಲದೆ ಧಾರ್ಮಿಕತೆಯನ್ನು ಕಾಪಾಡುವಲ್ಲಿ ಸುಳ್ಯ ದಸರಾ ಶ್ರೇಷ್ಠತೆ ಉಳಿಸಿಕೊಂಡಿದೆ: ರಾಜೇಶನಾಥಜೀ













