ಸಂಪಾಜೆ: ಸಂಪಾಜೆ ಗ್ರಾಮದ ಕೀಲಾರು, ಕೀಲಾರುಮೂಲೆ, ಕೈಪಡ್ಕ ಹಾಗೂ ನೆಲ್ಲಿಕುಮೇರಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ.
ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿವೆ. ಕಲ್ಲುಗುಂಡಿಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಕಾಂಪೌಂಡ್ಗೂ ಹಾನಿ ಮಾಡಿದ್ದು, ಕೃಷಿ ಪ್ರದೇಶಗಳ ಜತೆಗೆ ಧಾರ್ಮಿಕ ಕ್ಷೇತ್ರದ ಆಸ್ತಿಗೂ ಹಾನಿಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆಯೂ ಈ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡು ದಾಂಧಲೆ ನಡೆಸಿವೆ. ನಿರಂತರವಾಗಿ ಕೃಷಿ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೃಷಿಕರು ಪರದಾಡುವಂತಾಗಿದೆ. ಜನವಸತಿ ಪ್ರದೇಶಗಳ ಸಮೀಪವೇ ಆನೆಗಳ ಸಂಚಾರ ಕಂಡುಬರುತ್ತಿರುವುದರಿಂದ ಜನರಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.
ಕೃಷಿಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ರೈತರಿಗೆ ಕಾಡಾನೆಗಳ ಹಾವಳಿ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಈಗಾಗಲೇ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರು, ಮತ್ತೆ ಮತ್ತೆ ನಡೆಯುತ್ತಿರುವ ದಾಳಿಯಿಂದ ಕಂಗೆಟ್ಟಿದ್ದಾರೆ.
ಅರಣ್ಯ ಇಲಾಖೆಯ ತುರ್ತು ಕ್ರಮಕ್ಕೆ ಆಗ್ರಹ
ಸಂಪಾಜೆ ಪರಿಸರದಲ್ಲಿ ಮುಂದುವರಿದಿರುವ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಬೆಳೆಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ, ಜನವಸತಿ ಪ್ರದೇಶಗಳಲ್ಲಿನ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕಾಡಾನೆಗಳ ದಾಳಿಯಿಂದ ನಷ್ಟ ಅನುಭವಿಸಿರುವ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಯಿಸಿದ್ದಾರೆ.
ಸಂಪಾಜೆಯಲ್ಲಿ ಕಾಡಾನೆಗಳ ಅಟ್ಟಹಾಸ: ಕೃಷಿ ಬೆಳೆಗಳಿಗೆ ಹಾನಿ, ದೇವಸ್ಥಾನದ ಕಾಂಪೌಂಡ್ ಕುಸಿತ













