ಪಂಜ: ಇಲ್ಲಿನ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ನಡೆಯುತ್ತಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುತ್ತಿದೆ. ಅ.11ರಂದು ಆರಂಭಗೊಂಡಿರುವ ನವರಾತ್ರಿ ಪೂಜಾ ಮಹೋತ್ಸವವು ಅ.20ರವರೆಗೆ ನಡೆಯಲಿದೆ.
ಅ.18ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕಲಾಕ್ಷೇತ್ರ ಪಂಜ ಇವರ ವತಿಯಿಂದ ನಡೆದ ನಾಟ್ಯ ವೈಭವವು ನೆರೆದ ಭಕ್ತರ ಮನಸೂರೆಗೊಂಡಿತು. ಭಜನೆಯ ಭಕ್ತಿರಸ ಹಾಗೂ ನೃತ್ಯಕಲೆಯ ಸೊಬಗು ದೇವಸ್ಥಾನದ ಪರಿಸರದಲ್ಲಿ ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಕಳೆಗಟ್ಟಿಸಿತು.
ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಹಾಪೂಜೆ ನೆರವೇರಿಸಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗೌರವ ಸಲಹೆಗಾರರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ಅ.19ರಂದು ಭಜನಾ ಸಂಕೀರ್ತನೆ, ಭಕ್ತಿ ಗಾಯನ
ನವರಾತ್ರಿ ಮಹೋತ್ಸವದ ಅಂಗವಾಗಿ ಅ.19ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕೇನ್ಯ ಇವರ ವತಿಯಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬಳಿಕ ಶ್ರೀಮತಿ ಗೀತ ಸುಧಾ ತೋಟ ಇವರಿಂದ ‘ಭಕ್ತಿ ಗಾಯನ’ ಕಾರ್ಯಕ್ರಮ ಜರುಗಲಿದೆ.
ನವರಾತ್ರಿಯ ಪವಿತ್ರ ದಿನಗಳಲ್ಲಿ ನಡೆಯುತ್ತಿರುವ ಭಜನೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನದಲ್ಲಿ ಭಕ್ತಿಭಾವವನ್ನು ಹೆಚ್ಚಿಸುವುದರೊಂದಿಗೆ ದೇವಿಯ ಆರಾಧನೆಗೆ ವಿಶೇಷ ಮೆರುಗು ನೀಡುತ್ತಿವೆ.
ಪಂಜದಲ್ಲಿ ಭಕ್ತಿಭಾವದ ನವರಾತ್ರಿ ಸಂಭ್ರಮ: ಭಜನಾ ಸಂಕೀರ್ತನೆ, ನಾಟ್ಯ ವೈಭವ













