ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಿಇಟಿ ಶುಲ್ಕ ವಸೂಲಿ ಆರೋಪ: ತನಿಖೆಗೆ ಎಬಿವಿಪಿ ಆಗ್ರಹ

ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಿಇಟಿ ಕೋಚಿಂಗ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಗ್ರಹಿಸಿದೆ.ಈ ಸಂಬಂಧ ಎಬಿವಿಪಿ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕಳೆದ ಕೆಲವು ವರ್ಷಗಳಿಂದ ಕಾಲೇಜಿನಲ್ಲಿ ಅಧಿಕೃತ ಅನುಮತಿಯಿಲ್ಲದೆ ಸಿಇಟಿ ತರಗತಿಗಳನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳಿಂದ ತಲಾ ಸುಮಾರು ₹16,000 ಶುಲ್ಕವನ್ನು ರಶೀದಿ ನೀಡದೆ ವಸೂಲಿ ಮಾಡಲಾಗಿದೆ ಎಂದು ಎಬಿವಿಪಿ ಮನವಿಯಲ್ಲಿ ಆರೋಪಿಸಿದೆ. ಈ ಕುರಿತು ಪ್ರಶ್ನಿಸಿದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಗದರಿಸಿದ್ದಾರೆ ಎಂಬ ಆರೋಪವನ್ನೂ ಸಂಘಟನೆ ಮುಂದಿಟ್ಟಿದೆ. ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಆರೋಪಗಳು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.ಮನವಿಗೆ ಸ್ಪಂದಿಸಿದ ದೇವಸ್ಥಾನದ ಅಧ್ಯಕ್ಷರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಧ್ಯಕ್ಷರ ಸಕಾರಾತ್ಮಕ ಸ್ಪಂದನೆಗೆ ಎಬಿವಿಪಿ ಸ್ವಾಗತ ವ್ಯಕ್ತಪಡಿಸಿದೆ.ಆದರೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಸಮರ್ಪಕ ಸ್ಪಂದನೆ ದೊರೆಯದೆ, ವಾದಕ್ಕೆ ಇಳಿದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಂಘಟನೆ ತಿಳಿಸಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಜವಾಬ್ದಾರಿಯುತವಾಗಿ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.ಈ ಕುರಿತು ಮಾತನಾಡಿದ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ (2025–26) ಅಧ್ಯಕ್ಷ ಮುಳಿಯ ಸಾತ್ವಿಕ್, “ವಿದ್ಯಾರ್ಥಿಗಳ ಮನವಿಗೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿ, ಮುಂದಿನ ವರ್ಷದಿಂದ ಯಾವುದೇ ಶುಲ್ಕ ವಸೂಲಿ ಮಾಡದಂತೆ ಭರವಸೆ ನೀಡಿರುವುದು ಸ್ವಾಗತಾರ್ಹ. ಆದರೆ, ಇಒ ಅವರ ಸ್ಪಂದನೆಯ ರೀತಿಯಿಂದ ನಮಗೆ ತೀವ್ರ ಅಸಮಾಧಾನವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಜವಾಬ್ದಾರಿಯುತವಾಗಿ ಸ್ಪಂದಿಸಬೇಕು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಅಧ್ಯಕ್ಷರು ನೀಡಿರುವ ಭರವಸೆಯಂತೆ ಮುಂದಿನ ವರ್ಷದಿಂದ ಶುಲ್ಕ ವಸೂಲಿ ನಡೆಯದಂತೆ ಖಚಿತಪಡಿಸಬೇಕು” ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಬಿವಿಪಿ ಕಡಬ ತಾಲೂಕು ಸಂಚಾಲಕ ಹಾರ್ಧಿಕ್, ಸುಬ್ರಹ್ಮಣ್ಯದ ವಿದ್ಯಾರ್ಥಿ ನಾಯಕರಾದ ಹವ್ಯಾಸ್ ಗೌಡ, ಚಿನ್ಮಯ್ ಡಿ.ಎಸ್., ಶ್ರೀಶರಣ್ ಮೊಗ್ರ ಹಾಗೂ ಅಮಿತ್ ನಾಯಕ್ ಉಪಸ್ಥಿತರಿದ್ದರು



















Leave a Comment

Your email address will not be published. Required fields are marked *

error: Content is protected !!
Scroll to Top