ಕೊಣಾಜೆ ಪೊಲೀಸ್ ಠಾಣೆಯಲ್ಲಿ ಭಾವನಾತ್ಮಕ ಸನ್ನಿವೇಶ
ಮಂಗಳೂರು: ಹೆತ್ತು, ಹೊತ್ತು, ಪ್ರೀತಿಯಿಂದ ಬೆಳೆಸಿದ ಮಗಳು ತಮ್ಮಿಂದ ದೂರವಾಗುತ್ತಿದ್ದಾಳೆ ಎಂಬ ನೋವು ಒಂದೆಡೆಯಾದರೆ, ಆಕೆಯನ್ನು ಮನೆಗೆ ಕರೆದುಕೊಂಡು ಹೋಗಬೇಕೆಂಬ ಹಂಬಲ ಮತ್ತೊಂದೆಡೆ. ಮಗಳ ಮನಸ್ಸು ಬದಲಾಯಿಸಬಹುದೆಂಬ ಕೊನೆಯ ಆಸೆಯಿಂದ ಹೆತ್ತವರು ಮಾಡಿದ ಮನವಿಯೂ ಫಲ ನೀಡಲಿಲ್ಲ. ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಅವರೊಂದಿಗೆ ತೆರಳಲು ನಿರಾಕರಿಸಿದ ಘಟನೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕುಮಟಾದ ಮದರಸವೊಂದರಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ 22 ವರ್ಷದ ಯುವತಿಯನ್ನು, ಅದೇ ಮದರಸದಲ್ಲಿ ಹಿಂದೆ ಧರ್ಮಗುರುವಾಗಿದ್ದ ಉಳ್ಳಾಲ ಮೂಲದ ಅಸೈಗೋಳಿ ನಿವಾಸಿ ಅಶ್ರಫ್ ಸಅದಿ ಅವರು ಕುಮಟಾದಿಂದ ಅಸೈಗೋಳಿಗೆ ಕರೆತಂದು ವಿವಾಹ ನೋಂದಣಿ ಮಾಡಿಕೊಂಡಿರುವ ವಿಚಾರ ಈ ಘಟನೆಗೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಅಶ್ರಫ್ ಸಅದಿ ಅವರಿಗೆ ಈಗಾಗಲೇ ವಿವಾಹವಾಗಿದ್ದು, ಮಕ್ಕಳೂ ಇದ್ದಾರೆ. ವರ್ಷಗಳ ಹಿಂದೆ ಕುಮಟಾದ ಮದರಸದಲ್ಲಿ ಧರ್ಮಗುರುವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮದರಸಕ್ಕೆ ಬರುತ್ತಿದ್ದ ಯುವತಿಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಬಳಿಕ ಮದರಸವನ್ನು ತೊರೆದು ಮುಂಬಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಅ. 22ರಂದು ಕುಮಟಾಕ್ಕೆ ತೆರಳಿ ಯುವತಿಯನ್ನು ತಮ್ಮೊಂದಿಗೆ ಅಸೈಗೋಳಿಗೆ ಕರೆತಂದಿದ್ದು, ನಂತರ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಗಳು ಮನೆಗೆ ಮರಳದೆ ಇರುವುದರಿಂದ ಆತಂಕಗೊಂಡ ಪೋಷಕರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಕೊಣಾಜೆ ಪೊಲೀಸ್ ಠಾಣೆಗೆ ಆಗಮಿಸಿದ ಅವರು, ಮಗಳನ್ನು ತಮ್ಮೊಂದಿಗೆ ಮನೆಗೆ ಕಳುಹಿಸಿಕೊಡುವಂತೆ ಪೊಲೀಸರ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ಮಗಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದ ಪೋಷಕರು, ಆಕೆಯನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನಿಸಿದ್ದಾರೆ. ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಆಕೆಯೊಂದಿಗೆ ಮಾತನಾಡಿ, ತಮ್ಮೊಂದಿಗೆ ಮರಳುವಂತೆ ಕೋರಿದ್ದಾರೆ. ಆದರೆ, ಕುಟುಂಬದವರ ಮನವಿಗೆ ಯುವತಿ ಒಪ್ಪಿಗೆ ಸೂಚಿಸದೆ, ಅಶ್ರಫ್ ಸಅದಿ ಅವರೊಂದಿಗೇ ತೆರಳುವುದಾಗಿ ತಿಳಿಸಿದ್ದಾಳೆ.
ತನ್ನ ವಿವಾಹದ ವಿಚಾರವನ್ನು ಮುಚ್ಚಿಟ್ಟು ಪ್ರೀತಿಯ ನಾಟಕವಾಡಿ ಮಗಳನ್ನು ಕರೆದುಕೊಂಡು ಹೋಗಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಮಗಳ ನಿರ್ಧಾರದಿಂದ ಆಘಾತಕ್ಕೊಳಗಾದ ಹೆತ್ತವರು, ಆಕೆಯನ್ನು ಮನೆಗೆ ಕಳುಹಿಸಿಕೊಡುವಂತೆ ಕಣ್ಣೀರಿಡುತ್ತಾ ಮನವಿ ಮಾಡಿದ ದೃಶ್ಯ ಠಾಣೆಯಲ್ಲಿದ್ದವರ ಗಮನ ಸೆಳೆದಿದೆ.
ಒಂದೆಡೆ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗಬೇಕೆಂಬ ಹೆತ್ತವರ ಕಳಕಳಿ, ಮತ್ತೊಂದೆಡೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಯುವತಿ ನಿರಾಕರಿಸಿದ ಪರಿಸ್ಥಿತಿ ಠಾಣೆಯಲ್ಲಿ ಭಾವನಾತ್ಮಕ ವಾತಾವರಣಕ್ಕೆ ಕಾರಣವಾಯಿತು. ಕೊನೆಗೆ ಯುವತಿ ತನ್ನ ಹೇಳಿಕೆಯನ್ನು ದಾಖಲಿಸಿ, ಅಶ್ರಫ್ ಸಅದಿ ಅವರೊಂದಿಗೇ ತೆರಳಿದ್ದಾಳೆ ಎಂದು ತಿಳಿದುಬಂದಿದೆ.















