ಸುಳ್ಯದಲ್ಲಿ ನ.15ರಂದು 17ನೇ ವರ್ಷದ ‘ವರ್ಣಚಿತ್ತಾರ’ ಚಿತ್ರಕಲಾ ಸ್ಪರ್ಧೆ, ಚಿತ್ರಜಾತ್ರೆ

ಸುಳ್ಯ: ಮಕ್ಕಳಲ್ಲಿ ಚಿತ್ರಕಲೆಯ ಆಸಕ್ತಿ, ಸೃಜನಶೀಲತೆ ಹಾಗೂ ಕಲಾತ್ಮಕ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ, ಇಂಟರ್ಯಾಕ್ಟ್ ಕ್ಲಬ್, ರೋಟರಿ ಪ್ರಾಥಮಿಕ ಶಾಲೆ, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ 17ನೇ ವರ್ಷದ ಅವಿಭಜಿತ ಸುಳ್ಯ ತಾಲೂಕು ಮಟ್ಟದ ‘ವರ್ಣಚಿತ್ತಾರ’ ಚಿತ್ರಕಲಾ ಸ್ಪರ್ಧೆ ಹಾಗೂ ಚಿತ್ರಜಾತ್ರೆ ನ.15ರಂದು ಸುಳ್ಯದ ರಥಬೀದಿಯ ರೋಟರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ನಡೆಯಲಿದೆ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್ ತಿಳಿಸಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಯಲಿರುವ ಈ ವರ್ಷದ ಕಾರ್ಯಕ್ರಮಕ್ಕೆ ‘Create Lasting Impact’ ಎಂಬ ಆಶಯವನ್ನು ಇರಿಸಿಕೊಳ್ಳಲಾಗಿದೆ. ಚಿತ್ರಕಲಾ ಸ್ಪರ್ಧೆಯೊಂದಿಗೆ ಚಿತ್ರಜಾತ್ರೆ, ಕಲಾವಿದರಿಂದ ನೇರ ಚಿತ್ರ ರಚನೆ, ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ವಿಶೇಷ ಆಕರ್ಷಣೆಯಾಗಿರಲಿವೆ.
ಏಷ್ಯಾದ ಅತ್ಯಂತ ವೇಗದ ಚಿತ್ರಕಲಾವಿದರೆಂಬ ಖ್ಯಾತಿ ಪಡೆದಿರುವ ವಿಲಾಸ್ ನಾಯಕ್ ಅವರು ಬೆಳಗ್ಗೆ 9.30ಕ್ಕೆ ವೇಗದ ಚಿತ್ರ ರಚಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಮೈಸೂರು ಬೃಂದಾವನದ ಪಿಡಿಜಿ ಮೇಯರ್ ಡೋನರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಕಲಾವಿದ ವಿಲಾಸ್ ನಾಯಕ್, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಪ್ರಭಾಕರನ್ ನಾಯರ್, ರಿಷಿ ಫ್ಯಾನ್ಸಿ ಆ್ಯಂಡ್ ಟಾಯ್ಸ್ ಮಾಲಕ ಅನಂತರಾಜ್, ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಶಿಕ್ಷಣ ತಜ್ಞ ಡಾ. ಸುಂದರ್ ಕೇನಾಜೆ, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಚರಿಷ್ಮಾ ರೈ ಹಾಗೂ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಮಧುಸೂಧನ್ ಕುಂಭಕ್ಕೋಡ್, ಉದ್ಯಮಿ ಅಶೋಕ್ ಪ್ರಭು, ರೋಟರಿ ಕ್ಲಬ್ ಸುಳ್ಯದ ಪೂರ್ವಾಧ್ಯಕ್ಷ ಡಾ. ರಾಮ್ ಮೋಹನ್ ಕೆ.ಎನ್., ಭಾರತ್ ಆಗ್ರೋ ಸರ್ವಿಸ್ ಆ್ಯಂಡ್ ಸಪ್ಲೈಸ್ ಮಾಲಕ ರಾಮಚಂದ್ರ ಪೆರಿಯಡ್ಕ, ಜೆಸಿಐ ವಲಯ 15ರ ಉಪಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಸುದ್ದಿ ಬಿಡುಗಡೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ಚಿತ್ ಕಾಳಮನೆ ಭಾಗವಹಿಸಲಿದ್ದಾರೆ.
20 ವರ್ಷಗಳ ಕಲಾ ಶಿಕ್ಷಣದ ಪಯಣ
ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯನ್ನು ಶ್ರೀಹರಿ ಪೈಂದೋಡಿ ಹಾಗೂ ಪ್ರಸನ್ನ ಐವರ್ನಾಡು ಅವರು ಪೋಷಕರ ಆಶಯದಂತೆ 2006ರಲ್ಲಿ ಸುಳ್ಯದಲ್ಲಿ ಸ್ಥಾಪಿಸಿದ್ದರು. ಇದೀಗ ಸಂಸ್ಥೆ 20ನೇ ವರ್ಷದ ಸಂಭ್ರಮದಲ್ಲಿದೆ. ಈ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡಿದ್ದು, ಕರ್ನಾಟಕ ಸರಕಾರದ ಮೌಲ್ಯನಿರ್ಣಯ ಮಂಡಳಿ ನಡೆಸುವ ಚಿತ್ರಕಲಾ ಪರೀಕ್ಷೆಯಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಲಾಗಿದೆ.
ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಆರ್ಕಿಟೆಕ್ಚರ್, ಎಂಜಿನಿಯರಿಂಗ್, ಆರ್ಟ್ ಡಿಸೈನ್, ಅನಿಮೇಷನ್, ಗ್ರಾಫಿಕ್ ಡಿಸೈನ್, ಪೇಂಟಿಂಗ್, ಇಂಟೀರಿಯರ್ ಡೆಕೋರೇಷನ್, ಫ್ಯಾಷನ್ ಡಿಸೈನ್ ಹಾಗೂ ಚಿತ್ರಕಲಾ ಬೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಂಡಿದ್ದಾರೆ.
2010ರಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರ ಸಾರಥ್ಯದಲ್ಲಿ ನಡೆದ ಸುಳ್ಯ ಹಬ್ಬದ ಸಂದರ್ಭದಲ್ಲಿ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ವತಿಯಿಂದ ಮೊದಲ ಬಾರಿಗೆ ಸುಳ್ಯ ತಾಲೂಕು ಮಟ್ಟದ ‘ವರ್ಣಚಿತ್ತಾರ’ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಉತ್ಸಾಹವನ್ನು ಗಮನಿಸಿ ಮುಂದಿನ ವರ್ಷಗಳಲ್ಲಿಯೂ ಸ್ಪರ್ಧೆ ಮುಂದುವರಿಸುವಂತೆ ಡಾ. ಯು.ಪಿ. ಶಿವಾನಂದ ಪ್ರೋತ್ಸಾಹಿಸಿದ್ದರು. ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ಅವರೂ ನಿರಂತರ ಸಲಹೆ, ಸಹಕಾರ ನೀಡಿದ್ದಾರೆ.
ಕೊರೊನಾ ಅವಧಿಯಲ್ಲಿಯೂ ವಾಟ್ಸ್‌ಆ್ಯಪ್ ಹಾಗೂ ಅಂಚೆ ಮೂಲಕ ಸ್ಪರ್ಧೆ ಮುಂದುವರಿಸಲಾಗಿತ್ತು. ಬೆಂಗಳೂರಿನ ಉದ್ಯಮಿ ಅನಂತರಾಜ್ ಮಾಯ್ಸನ ಅವರು ಪ್ರತಿವರ್ಷ ಬಹುಮಾನಗಳ ಪ್ರಾಯೋಜಕರಾಗಿ ಸಹಕರಿಸುತ್ತಿದ್ದಾರೆ.
ಚಿತ್ರಜಾತ್ರೆಯಲ್ಲಿ ನಾಡಿನ ಕಲಾವಿದರ ಕಲಾಕೃತಿ ಅನಾವರಣ
ಈ ಬಾರಿಯ ವರ್ಣಚಿತ್ತಾರವನ್ನು ವಿಭಿನ್ನವಾಗಿ ಆಯೋಜಿಸಲಾಗಿದ್ದು, ಮಂಗಳೂರು ಮಹಾಲಸಾ ಸ್ಕೂಲ್ ಆಫ್ ಆರ್ಟ್ಸ್, ಬೆಂಗಳೂರು ಚಿತ್ರಕಲಾ ಪರಿಷತ್ ಹಾಗೂ ಮೈಸೂರು ಕಾವಾದಲ್ಲಿ ವ್ಯಾಸಂಗ ಮಾಡುತ್ತಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ನಾಡಿನ ವಿವಿಧ ಭಾಗಗಳ ಕಲಾವಿದರು ರೋಟರಿ ಶಾಲೆಯ ಒಳಾಂಗಣ ಹಾಗೂ ರಥಬೀದಿಯಲ್ಲಿ ಸ್ಥಳದಲ್ಲೇ ಚಿತ್ರಗಳನ್ನು ರಚಿಸಲಿದ್ದಾರೆ. ಚಿತ್ರಕಲಾ ಪ್ರದರ್ಶನವೂ ನಡೆಯಲಿದೆ. ಸುಮಾರು 2,500 ವಿದ್ಯಾರ್ಥಿಗಳು ಹಾಗೂ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಚಿತ್ರಜಾತ್ರೆಯಲ್ಲಿ ಬಾಲಕೃಷ್ಣ ಶೆಟ್ಟಿ, ಮೋಹನ್ ಎಣ್ಣೂರು, ಸುಧೀರ್ ಕುಮಾರ್ ಜಿ., ಪ್ರಕಾಶ್ ಎನ್., ಜಗನ್ನಾಥ ಅರಿಯಡ್ಕ, ರಂಜಿತ್ ಕೆ.ಎಂ., ಮುರಳೀಕೃಷ್ಣ ರಾವ್, ರಾಜೇಶ್ವರಿ ಕುಡುಪು, ಸದಾನಂದ ಬಿರಾದಾರ್, ಮುರಳೀಧರ್ ಆಚಾರ್ಯ, ಧನಂಜಯ್ ಕೊಲ್ಯ, ಮಂಜುನಾಥ್ ನಾಯಕ್, ಚಂದ್ರಾಡ್ಯಾರ್, ಸುಚೇತ್ ಸುಳ್ಯ ಸೇರಿದಂತೆ ಹಲವು ಕಲಾವಿದರು ಭಾಗವಹಿಸಲಿದ್ದಾರೆ.
ಇವರೊಂದಿಗೆ ಉಲ್ಲಾಸ್ ಸುಳ್ಯ, ಶುಭಾ ನಿಡುಬೆ, ಅಶ್ವಥಿ ಯು.ಕೆ. ಕಾಸರಗೋಡು, ಸಂದೇಶ್ ಕಾಸರಗೋಡು, ರಾಹುಲ್ ಸುಳ್ಯ, ಜೀವನ್ ಎನ್.ಬಿ. ಉಪ್ಪಿನಂಗಡಿ, ಸೋನಾಲ್ ಡಿಸೋಜ ಸುರತ್ಕಲ್, ಆದರ್ಶ್ ಆಚಾರ್ಯ ಕುಂದಾಪುರ, ಜಯರಾಮ್ ಎಸ್. ಕಾರ್ವಿ ಕುಂದಾಪುರ, ವೈಶಾಖ್ ರೈ ಕಾಸರಗೋಡು, ಅಶ್ವಿನ್ ಕುಲಾಲ್ ಮುಡಿಪು, ನಂದನ್ ಡಿ.ಎಸ್. ಬಂಟ್ವಾಳ, ರೂಪೇಶ್ ಸುವರ್ಣ ಬೆಳ್ತಂಗಡಿ, ಲಿಖಿತ್ ಪೂಜಾರಿ ಹಳೆಯಂಗಡಿ, ದೀಕ್ಷಿತ್ ಗಾಣಿಗ ಪುತ್ತೂರು, ಅಭಿಷೇಕ್ ಆಚಾರ್ಯ ಬೆಳ್ಳಾರೆ, ದರ್ಶನ್ ಆಚಾರ್ಯ ಕುಮಟಾ, ವಾರುಣಿ ಆರ್. ಸುರತ್ಕಲ್, ಅನುಶ್ರೀ ಮೂಡಿಗೆರೆ, ಅಕ್ಷಿತಾ ಕಾಸರಗೋಡು, ಪ್ರಥ್ವಿನ್ ಪೆರುವಾಜೆ, ಜನಕ ಕಾಂಚೋಡು ಹಾಗೂ ಸಂಜನಾ ಸುಳ್ಯ ಸೇರಿದಂತೆ ವಿವಿಧ ಕಲಾ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು
ಚಿತ್ರಕೂಟ ಗುತ್ತಿಗಾರು, ಮಹಾಲಸಾ ಮಂಗಳೂರು, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ಸತ್ಯಪ್ರಕಾಶ್ ಸುಳ್ಯ, ಆರ್ಟ್ ಗ್ಯಾಲರಿ ಸುಳ್ಯ, ಹವ್ಯಾಸಿ ಕಲಾವಿದರು ಸುಳ್ಯ, ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ, ಸರಕಾರಿ ಪ್ರೌಢಶಾಲೆ ಎಣ್ಣೂರು, ಶ್ರವಣ್ ಆರಂಬೂರು, ಚಿತ್ಕಲ ಆರ್ಟ್ಸ್ ಪನ್ನೆ ಬೆಳ್ಳಾರೆ ಹಾಗೂ ಆರ್ಟ್ ಲೇಖನಿ ಸುಳ್ಯ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಕಲಾವಿದರ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇರಲಿವೆ.
. ಪತ್ರಿಕಾಗೋಷ್ಠಿಯಲ್ಲಿ ಮಧುಸೂಧನ್, ರಿಷಿ ಫ್ಯಾನ್ಸಿ ಮಾಲಕ ಅನಂತರಾಜ್, ರೋಟರಿ ಕ್ಲಬ್ ಖಜಾಂಚಿ ನಳಿನಿ ಕಿರ್ಲಾಯ,ಪುರುಶೋತ್ತಮ‌ ಕಿರ್ಲಾಯ ಹಾಗೂ ಚಿತ್ರಕಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು ಉಪಸ್ಥಿತರಿದ್ದರು.





































































Leave a Comment

Your email address will not be published. Required fields are marked *

error: Content is protected !!
Scroll to Top